ಸಮಾಜ ಸೇವೆಯ ಮೂಲಕ ಜನಮನ ಗೆದ್ದ ಮುರಿಗೆಪ್ಪ ಮಾಲಗಾರ: ಬಡವರ ಪಾಲಿನ ಆಶಾಕಿರಣ.

ಜನಮನ ಗೆದ್ದ ಮುರಿಗೆಪ್ಪ ಮಾಲಗಾರ

ಬೆಳಗಾವಿ (ಮೂಡಲಗಿ) : ಸಮಾಜ ಸೇವೆ ಎನ್ನುವುದು ಕೇವಲ ಮಾತಿನಲ್ಲೇ ಉಳಿಯದೆ, ಅದನ್ನು ನಿಸ್ವಾರ್ಥ ಮನೋಭಾವದಿಂದ ಜೀವನದಲ್ಲಿ ಅಳವಡಿಸಿಕೊಂಡ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಹಳ್ಳೂರಿನ ಮುರಿಗೆಪ್ಪ ಮಾಲಗಾರ ಅವರು ಪ್ರಮುಖರು.

ತಮ್ಮ ಬದುಕಿನ ಅನೇಕ ಸವಾಲುಗಳ ನಡುವೆಯೂ ಬಡವರು, ದೀನ ದಲಿತರು, ನಿರ್ಗತಿಕರು ಹಾಗೂ ವಯೋವೃದ್ಧರ ಪರವಾಗಿ ಸದಾ ಮಿಡಿಯುವ ಹೃದಯವನ್ನು ಹೊಂದಿರುವ ಅವರು ಇಂದು ಸಾವಿರಾರು ಜನರ ವಿಶ್ವಾಸದ ಪ್ರತೀಕವಾಗಿದ್ದಾರೆ.

ಜನಮನ ಗೆದ್ದ ಮುರಿಗೆಪ್ಪ ಮಾಲಗಾರ :

ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಸಾಧನೆ, ಸೇವಾ ಮನೋಭಾವ ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸುವುದು ಅನೇಕರಿಗೆ ಪ್ರೇರಣೆಯಾಗಿದೆ.

ಕೆಲವರು ಟೀಕಿಸಿದರು, ಕೆಲವರು ಹಂಗಿಸಿದರು. ಆದರೆ ಪ್ರಶಂಸೆಯಿಂದ ಹಿಗ್ಗದೆ, ಟೀಕೆಯಿಂದ ಕುಗ್ಗದೆ ಸಮಾಜ ಸೇವೆಯ ದಾರಿಯಲ್ಲಿ ದೃಢವಾಗಿ ಸಾಗಿದ ಮುರಿಗೆಪ್ಪ ಮಾಲಗಾರ ಅವರು, ಯಾವುದೇ ಅಧಿಕಾರ ಅಥವಾ ಹುದ್ದೆಯ ಆಸೆ ಇಲ್ಲದೆ ಬಡ ಜನರ ಮನೆ ಮನೆಗೆ ತೆರಳಿ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ.

ಪಡಿತರ ಚೀಟಿ (Ration Card), ಪ್ರಧಾನಮಂತ್ರಿ ಕಿಸಾನ್ ಯೋಜನೆ (PM Kisan Scheme), ಉಜ್ವಲ ಗ್ಯಾಸ್ ಯೋಜನೆ (Ujjwala Scheme), ವೃದ್ಧಾಪ್ಯ ವೇತನ (Old Age Pension), ಅಂಗವಿಕಲರ ಸೌಲಭ್ಯಗಳು ಸೇರಿದಂತೆ ಅನೇಕ ಸರ್ಕಾರಿ ಯೋಜನೆಗಳ ಮಾಹಿತಿ ನೀಡಿ, ಅರ್ಹರಿಗೆ ತಲುಪಿಸುವ ಕಾರ್ಯದಲ್ಲಿ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಮೂಡಲಗಿ ತಾಲ್ಲೂಕು ಮಾತ್ರವಲ್ಲದೆ ಗೋಕಾಕ, ರಾಯಬಾಗ, ರಬಕವಿ-ಬನಹಟ್ಟಿ ಭಾಗಗಳಲ್ಲಿಯೂ ಸಾವಿರಾರು ಬಡಜನರ ಬದುಕಿಗೆ ಬೆಳಕಾಗಿದ್ದಾರೆ.

ಜಾತಿ, ಮತ, ಪಂಥ, ಪಂಗಡ ಎನ್ನದೇ ಪ್ರತಿಯೊಬ್ಬರ ನೋವಿಗೂ ಸ್ಪಂದಿಸುವ ಗುಣ ಅವರದು. ಅನಾಥರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವ ಜನರ ಧ್ವನಿಯಾಗಿ ಕೆಲಸ ಮಾಡುವ ಮೂಲಕ ಅವರು ಜನರ ಪ್ರೀತಿ ಹಾಗೂ ವಿಶ್ವಾಸವನ್ನು ಸಂಪಾದಿಸಿದ್ದಾರೆ.

ಸಮೀರವಾಡಿಯ ಜಿ.ಬಿ.ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಸಾಮಾಜಿಕ ಸೇವೆಯಲ್ಲಿ ಯಾವುದೇ ದಣಿವು ತೋರಿಸದೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಆಧ್ಯಾತ್ಮಿಕ ಚಿಂತನೆಗಳತ್ತ ವಿಶೇಷ ಆಸಕ್ತಿ ಹೊಂದಿರುವ ಅವರು, ಮಠ-ಮಂದಿರಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರಿಗೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದಾರೆ.

ಸರಳ ಜೀವನ ಶೈಲಿ, ಮೃದು ಸ್ವಭಾವ, ನೇರ ನುಡಿ ಹಾಗೂ ಸಹಾಯ ಮಾಡುವ ಮನೋಭಾವದಿಂದ ಎಲ್ಲರ ಆತ್ಮೀಯರಾಗಿರುವ ಮುರಿಗೆಪ್ಪ ಮಾಲಗಾರ ಅವರು, ಬಡತನದ ಕಷ್ಟವನ್ನು ಅನುಭವಿಸಿರುವುದರಿಂದ ಬಡವರ ನೋವಿಗೆ ತಕ್ಷಣ ಸ್ಪಂದಿಸುವ ಗುಣ ಹೊಂದಿದ್ದಾರೆ.

ಇದನ್ನು ಓದಿ : ಸಿಂಧನೂರು: ರಿವರ್ಸ್ ಬಂದ ಕಾರು ಡಿಕ್ಕಿ, ದ್ವಿತೀಯ PUC ವಿದ್ಯಾರ್ಥಿನಿ ದುರ್ಮರಣ.

ಸದಾ ಹಸನ್ಮುಖಿಯಾಗಿ ಜನರ ನಡುವೆ ಓಡಾಡುವ ಅವರು, ನೊಂದವರ ಕಣ್ಣೀರು ಒರೆಸುವ ಸಹೃದಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪತ್ರಿಕಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಪ್ರಾಮಾಣಿಕ ಪತ್ರಕರ್ತರಾಗಿ ಸಮಾಜ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಸರ್ಕಾರ, ಮಠಮಾನ್ಯಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.

ಆರಿಸಿ ಬಂದ ಪ್ರಶಸ್ತಿಗಳು :

ಬೆಳಗಾವಿ ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಡಿ ಓರಿಯಂಟಲ್ ಫೌಂಡೇಶನ್ ವತಿಯಿಂದ ಇಂಡಿಯನ್ ಐಕಾನ್ ಅವಾರ್ಡ್, ಕನ್ನಡ ರತ್ನ ರಾಜ್ಯ ಪ್ರಶಸ್ತಿ, ಮಾಧ್ಯಮ ಸೇವಾ ರತ್ನ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಅವರು, ಸಮಾಜ ಸೇವೆಯಲ್ಲಿ ಮಾದರಿಯಾಗಿದ್ದಾರೆ.

ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಇಂತಹ ನಿಷ್ಠಾವಂತ ಪತ್ರಕರ್ತ ಹಾಗೂ ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರಿಗೆ ದೇವರು ಆಯುಷ್ಯ, ಆರೋಗ್ಯ, ಐಶ್ವರ್ಯ ನೀಡಿ ಇನ್ನಷ್ಟು ಕಾಲ ಸಮಾಜ ಸೇವೆ ಮಾಡುವ ಶಕ್ತಿ ನೀಡಲಿ ಎಂಬುದು ಎಲ್ಲರ ಹಾರೈಕೆ.

ಲೇಖನ: ಸಾಹಿತ್ಯ ರತ್ನ ಮಹಾರಾಜ ಸಿದ್ದು ಹಳ್ಳೂರ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top