ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲಿಯೇ ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ. ಇದರಿಂದ ಸರ್ಕಾರಿ ನೌಕರಿಗೆ ದಾರಿ ಕಾಯುತ್ತಿರುವ ಯುವಕ / ಯುವತಿಯರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಸದ್ಯ ರಾಜ್ಯದ ಆರ್.ಡಿ.ಪಿ.ಆರ್ (RDPR) ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮೊದಲ ಹಂತದಲ್ಲಿ 4,000 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಲು ಸೂಚಿಸಲಾಗಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ (KRIDL) ಕಚೇರಿಯಲ್ಲಿ ನಡೆದ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇರುವುದರಿಂದ ಆಡಳಿತಾತ್ಮಕ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹುದ್ದೆಗಳ ಭರ್ತಿಗೆ ವೇಗ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿಯಲ್ಲಿ ಎಷ್ಟು ಹುದ್ದೆಗಳು ಖಾಲಿ?
ಇಲಾಖೆಯಲ್ಲಿ ಒಟ್ಟು 25,540 ಮಂಜೂರಾದ ಹುದ್ದೆಗಳಿದ್ದು, ಅವುಗಳಲ್ಲಿ ಸುಮಾರು 8,770 ಹುದ್ದೆಗಳು ಖಾಲಿ ಇವೆ. ಈ ಪೈಕಿ ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳ ಸಂಖ್ಯೆ ಹೆಚ್ಚಿದ್ದು, ಸಾರ್ವಜನಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಸಿಬ್ಬಂದಿ ಅಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಲಿ ಹುದ್ದೆಗಳ ವಿವರ :
- ‘ಎ’ ವೃಂದ – 268 ಹುದ್ದೆಗಳು.
- ‘ಬಿ’ ವೃಂದ – 1,079 ಹುದ್ದೆಗಳು.
- ‘ಸಿ’ ವೃಂದ – 5,294 ಹುದ್ದೆಗಳು.
- ‘ಡಿ’ ವೃಂದ – 2,129 ಹುದ್ದೆಗಳು.
KEA ಮೂಲಕ ನೇಮಕಾತಿ :
ಮೊದಲ ಹಂತದಲ್ಲಿ 4,000 ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದ್ದು, ‘ಸಿ’ ಹಾಗೂ ‘ಡಿ’ ವೃಂದದ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ.
ಈಗಾಗಲೇ ಸುಮಾರು 1,400 ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ.
ಸಚಿವರು ನೀಡಿದ ಆದೇಶಗಳು ಹೀಗಿವೆ :
ಶುದ್ಧ ಕುಡಿಯುವ ನೀರಿಗೆ ಮೊದಲ ಆದ್ಯತೆ :
ಸಚಿವರು ಇದೇ ವೇಳೆ ಸಭೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನು ಓದಿ : ಖಾಸಗಿ ಬಸ್ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ; ರಾಜ್ಯಾದ್ಯಂತ ಇಂದಿನಿಂದ 5-8% ಟಿಕೆಟ್ ದರ ಏರಿಕೆ.
ನೀರಿನ ಗುಣಮಟ್ಟವನ್ನು NABL ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ನಿಯಮಿತವಾಗಿ ಪರೀಕ್ಷಿಸುವಂತೆ ಹಾಗೂ ಕಲುಷಿತ ನೀರಿನಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಸರ್ಕಾರಿ ಆಸ್ತಿಗಳ ಜಿಯೋ-ಟ್ಯಾಗಿಂಗ್ ಕಡ್ಡಾಯ :
ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು KRIDL ವತಿಯಿಂದ ನಿರ್ಮಿಸಲಾದ ಎಲ್ಲಾ ಸರ್ಕಾರಿ ಆಸ್ತಿಗಳನ್ನು ದಾಖಲಾತಿ ಮಾಡಿ ಜಿಯೋ-ಟ್ಯಾಗ್ (Geo-Tag) ಮಾಡುವಂತೆ ಸೂಚಿಸಲಾಗಿದೆ. ಇದರಿಂದ ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮತ್ತು ಮೇಲ್ವಿಚಾರಣೆ ಸುಲಭವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಇ-ಸ್ವತ್ತು ಸಮಸ್ಯೆಗಳಿಗೆ ಪರಿಹಾರ :
ಇತ್ತೀಚಿನ ದಿನಗಳಲ್ಲಿ ಇ-ಸ್ವತ್ತು (e-Swathu) ಸೇವೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿರುವುದನ್ನು ಉಲ್ಲೇಖಿಸಿದ ಸಚಿವರು, ತಾಂತ್ರಿಕ ಹಾಗೂ ಸರ್ವರ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಷ್ಕರಿಸಿ ಜನರಿಗೆ ಸುಗಮ ಸೇವೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ರಸ್ತೆ / ಹಸಿರು ಯೋಜನೆಗಳ ಮೇಲೂ ಒತ್ತು :
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದ್ದು, ಇನ್ನೂ ಸಾರಿಗೆ ಸೌಲಭ್ಯವಿಲ್ಲದ ಹಳ್ಳಿಗಳಿಗೆ ಸಂಪರ್ಕ ರಸ್ತೆ ನಿರ್ಮಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದೇ ವೇಳೆ ಮನರೇಗಾ (MNREGA) ಯೋಜನೆಯಡಿ ನೆಡಲಾಗಿರುವ ಸಸಿಗಳ ಜಿಯೋ-ಟ್ಯಾಗಿಂಗ್ ಮಾಡಿ ಸಾಮಾಜಿಕ ಅರಣ್ಯೀಕರಣದ ಸಮಗ್ರ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಸಿಗುವ ನಿರೀಕ್ಷೆಯಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆಯ ಸೇವಾ ವಿತರಣೆಯೂ ಮತ್ತಷ್ಟು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ.





