ತಂಬಾಕು ಸೇವನೆಯಿಂದ ವರ್ಷಕ್ಕೆ 13 ಲಕ್ಷ ಸಾವು; ಚಿಕ್ಕೋಡಿಯಲ್ಲಿ ಜಾಗೃತಿ ರ‍್ಯಾಲಿ.

ತಂಬಾಕು ಸೇವನೆಯಿಂದ ವರ್ಷಕ್ಕೆ 13 ಲಕ್ಷ ಸಾವು

ಚಿಕ್ಕೋಡಿ: ತಂಬಾಕು ಸೇವನೆಯು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ಸಮಸ್ಯೆಗಳು ಸೇರಿದಂತೆ ಅನೇಕ ಗಂಭೀರ ಆರೋಗ್ಯ ತೊಂದರೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಹಾಗೂ ಸಂತೋಷದ ಬದುಕಿಗಾಗಿ ಪ್ರತಿಯೊಬ್ಬರೂ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ ಕರೆ ನೀಡಿದರು.

ಅವರು ಚಿಕ್ಕೋಡಿಯಲ್ಲಿ ಕೆ.ಎಲ್.ಇ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ಎಲ್.ಇ. ನರ್ಸಿಂಗ್ ಮಹಾವಿದ್ಯಾಲಯ, ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ, ಪುರಸಭೆ, ಕೆಎಸ್‌ಆರ್‌ಟಿಸಿ ಹಾಗೂ ಜಿಲ್ಲಾ ತಂಬಾಕು (Tobacco) ನಿಯಂತ್ರಣ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತಂಬಾಕು ವ್ಯಸನಮುಕ್ತ ಕೇಂದ್ರ ಉದ್ಘಾಟನೆ ಮತ್ತು ತಂಬಾಕು ಮುಕ್ತ ಜಾಗೃತಿ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ :

ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕುಟುಂಬ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ಎಸ್. ಖಣದಾಳೆ ಮಾತನಾಡಿ, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳು ಅಗತ್ಯ ಎಂದು ತಿಳಿಸಿದರು.

ಈ ಸುದ್ದಿಯನ್ನು ಓದಿ : ಎಲ್ ನಿನೋ ಪರಿಣಾಮ: ಈ ಬಾರಿ ಭಾರತದಲ್ಲಿ ಕೈ ಕೊಡುತ್ತಾ ಮುಂಗಾರು?

ಕೆ.ಎಲ್.ಇ. ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕಿರಣಕುಮಾರ ಮುತ್ನಾಳಿ ಮಾತನಾಡಿ, ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಘೋಷವಾಕ್ಯ “ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಬಯಲುಪಡಿಸುವುದು” ಎಂದು ತಿಳಿಸಿದರು.

ಭಾರತವು ತಂಬಾಕು ಬಳಕೆಯಲ್ಲಿ ವಿಶ್ವದಲ್ಲೇ ಎರಡನೇ ಅತಿದೊಡ್ಡ ದೇಶವಾಗಿದ್ದು, ಸುಮಾರು 267 ಮಿಲಿಯನ್ ಜನರು ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ ಎಂದರು. ದೇಶದ ವಯಸ್ಕರಲ್ಲಿ ಶೇ. 28ರಷ್ಟು ಜನರು ತಂಬಾಕು ಸೇವಿಸುತ್ತಿದ್ದು, ಇವರಲ್ಲಿ ಶೇ. 42ರಷ್ಟು ಪುರುಷರು ಹಾಗೂ ಶೇ. 14ರಷ್ಟು ಮಹಿಳೆಯರು ಸೇರಿದ್ದಾರೆ.

ಪ್ರತಿವರ್ಷ ಸುಮಾರು 13 ಲಕ್ಷ ಜನರು ಸಾವು :

ತಂಬಾಕು ಸೇವನೆಯ ಪರಿಣಾಮವಾಗಿ ಭಾರತದಲ್ಲಿ ಪ್ರತಿವರ್ಷ ಸುಮಾರು 13 ಲಕ್ಷ ಜನರು ಸಾವನ್ನಪ್ಪುತ್ತಿದ್ದು, ಬಾಯಿ ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇ. 90ರಷ್ಟು ಪ್ರಕರಣಗಳು ತಂಬಾಕು ಬಳಕೆಗೆ ಸಂಬಂಧಿಸಿವೆ ಎಂದು ಅವರು ವಿವರಿಸಿದರು. ತಂಬಾಕು ಸಂಬಂಧಿತ ರೋಗಗಳಿಂದ ದೇಶದ ಆರ್ಥಿಕತೆಗೆ ವರ್ಷಕ್ಕೆ ಸುಮಾರು ₹1.7 ಲಕ್ಷ ಕೋಟಿ ನಷ್ಟ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು.

ಇದನ್ನು ಓದಿ : ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ; 3,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಚಾಲನೆ.

ತಂಬಾಕು ಸೇವನೆಯಿಂದ ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದು, ಬಾಯಿ ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳಿಗೆ ಇದು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.

ತಂಬಾಕು ಸೇವನೆಯಿಂದ ವರ್ಷಕ್ಕೆ 13 ಲಕ್ಷ ಸಾವು

ಜಾಗೃತಿ ರ‍್ಯಾಲಿ :

ವಿದ್ಯಾರ್ಥಿಗಳು ತಂಬಾಕು ವಿರೋಧಿ ಘೋಷಣೆಗಳನ್ನು ಕೂಗುತ್ತಾ ನಗರದ ಅಂಕಲಿ ಖೂಟದಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಜಾಗೃತಿ ರ‍್ಯಾಲಿ ನಡೆಸಿದರು. ರ‍್ಯಾಲಿಯಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಹಾನಿ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಪೊಲೀಸ್ ಉಪನಿರೀಕ್ಷಕ ಶ್ರೀ ಬಸಗೌಡಾ ನೇರ್ಲಿ ಯುವಜನರಲ್ಲಿ ತಂಬಾಕಿನ ದುಷ್ಪರಿಣಾಮಗಳು ಹಾಗೂ ಅದರಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ತಂಬಾಕು ವ್ಯಸನಮುಕ್ತ ಕೇಂದ್ರದ ಮುಖ್ಯಸ್ಥೆ ಡಾ. ಶ್ವೇತಾ ಪಾಟೀಲ್ ಕೇಂದ್ರದ ಸೇವೆಗಳು ಮತ್ತು ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ

ಕಾರ್ಯಕ್ರಮದಲ್ಲಿ ಡಾ. ಕೋಮಲ್ ಜಾಧವ ಅವರು ಸ್ವಾಗತಿಸಿದರು. ಡಾ. ಸುಧೀಂದ್ರ ಹೊನವಾಡ ಅವರು ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಗುಡ್ನವರ ಅವರು ವಂದಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top