ಗದಗ: ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಶವಯಾತ್ರೆಯಲ್ಲಿ ಪಾಲ್ಗೊಳ್ಳುವ ಅಪರೂಪದ ಮತ್ತು ಅಚ್ಚರಿ ಮೂಡಿಸುವಂತಾ ನಾಯಿ (ಶ್ವಾನ) ನಿಷ್ಠೆಯ ದೃಶ್ಯವೊಂದು ಗದಗ ಜಿಲ್ಲೆಯಲ್ಲಿ ಚರ್ಚಿತ ವಿಷಯವಾಗಿದ್ದು, ಸದ್ಯ ಸಾಮಾಜಿಕ ಜಾಲತಾಣ ಬಳಕೆದಾರರ ಗಮನವನ್ನು ಸೆಳೆಯುತ್ತಿದೆ.
ಇಂದಿನ ಕಾಲದಲ್ಲಿ ಮನುಷ್ಯರೇ ಮತ್ತೊಬ್ಬರ ನೋವಿಗೆ ಸ್ಪಂದಿಸಲು ಹಿಂಜರಿಯುವ ಸಂದರ್ಭಗಳು ಹೆಚ್ಚಾಗುತ್ತಿರುವಾಗ, ಮೂಕಪ್ರಾಣಿಯೊಂದು ತನ್ನ ವಿಶಿಷ್ಟ ವರ್ತನೆಯ ಮೂಲಕ ಮಾನವೀಯತೆಯ ಹೊಸ ಅರ್ಥವನ್ನು ಬಿಂಬಿಸುತ್ತಿದೆ.
ಬಳಕೆದಾರರ ಗಮನ ಸೆಳೆದ ನಾಯಿ :
ಗದಗ ಜಿಲ್ಲೆಯ ಒಂದು ಪುಟ್ಟ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಕಾಣಿಸುತ್ತಿರುವ ಶ್ವಾನದ ಈ ಅಪರೂಪದ ನಡವಳಿಕೆ ಇದೀಗ ಸ್ಥಳೀಯರಷ್ಟೇ ಅಲ್ಲ, ಸಾಮಾಜಿಕ ಜಾಲತಾಣ ಬಳಕೆದಾರರ ಗಮನವನ್ನು ಸೆಳೆಯುತ್ತಿದೆ.
ಈ ಸುದ್ದಿಯನ್ನು ಓದಿ : ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ; 3,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಚಾಲನೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಬೀದಿ ಶ್ವಾನಯೊಂದು ಕಳೆದ ನಾಲ್ಕು ವರ್ಷಗಳಿಂದ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸುವ ಅಪರೂಪದ ಗುಣವನ್ನು ಪ್ರದರ್ಶಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸ್ಮಶಾನದವರೆಗೂ ಹೆಜ್ಜೆ :
ಗ್ರಾಮದಲ್ಲಿ ಸಾವು ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆಯೇ ಈ ಶ್ವಾನ ನೇರವಾಗಿ ಮೃತರ ಮನೆ ಬಳಿ ಬಂದು ನಿಂತುಕೊಳ್ಳುತ್ತದೆ ಎನ್ನುವುದು ಜನರ ಆಶ್ಚರ್ಯಕ್ಕೆ ಕಾರಣವಾಗಿದೆ. ಅಷ್ಟೆ ಅಲ್ಲ ಮೃತದೇಹವನ್ನು ಅಂತಿಮ ಯಾತ್ರೆಗೆ ಕರೆದೊಯ್ಯುವ ವೇಳೆಯೂ ಈ ಶ್ವಾನ ಗ್ರಾಮಸ್ಥರೊಂದಿಗೆ ಹೆಜ್ಜೆ ಹಾಕುತ್ತಾ ಸ್ಮಶಾನದವರೆಗೆ ಸಾಗುತ್ತದೆ.
ಕೇವಲ ಅಲ್ಲಿಗೆ ಹೋಗುವುದಷ್ಟೇ ಅಲ್ಲ, ಅಂತ್ಯಕ್ರಿಯೆಯ ಸಂಪೂರ್ಣ ವಿಧಿವಿಧಾನಗಳು ಮುಗಿಯುವವರೆಗೂ ಶಾಂತವಾಗಿ ಅಲ್ಲಿಯೇ ಉಳಿಯುತ್ತದೆ. ನಂತರ ಗ್ರಾಮಸ್ಥರ ಜೊತೆಯಲ್ಲೇ ಮತ್ತೆ ಊರಿಗೆ ಮರಳುತ್ತದೆ ಎಂಬುದು ಜನರ ಮಾತು.
ಸಾಕು ನಾಯಿಯಲ್ಲ, ಇದು ಬೀದಿ ನಾಯಿ :
ಇತ್ತೀಚೆಗಷ್ಟೆ ಗ್ರಾಮದ ಹಿರಿಯ ಮಹಿಳೆಯೊಬ್ಬರ ಅಂತ್ಯಕ್ರಿಯೆಯ ಸಮಯದಲ್ಲೂ ಈ ದೃಶ್ಯ ಮರುಕಳಿಸಿದ್ದು, ಗ್ರಾಮಸ್ಥರು ಘಟನೆ ನೋಡಿ ನಾಯಿಯ ಬಗ್ಗೆ ಚರ್ಚೆ ಮಾಡಲು ಶುರುಮಾಡಿದ್ದಾರೆ. ಇನ್ನಷ್ಟು ಅಚ್ಚರಿಯ ಸಂಗತಿ ಏನೆಂದರೆ, ಈ ಶ್ವಾನಕ್ಕೆ ಯಾವುದೇ ತರಬೇತಿ ನೀಡಿಲ್ಲ ಮತ್ತು ಯಾರೊಬ್ಬರ ಈ ಶ್ವಾನಯನ್ನು ಸಾಕಿಲ್ಲ ಎಂಬುದು.
ಇದನ್ನು ಓದಿ : ಎಲ್ ನಿನೋ ಪರಿಣಾಮ: ಈ ಬಾರಿ ಭಾರತದಲ್ಲಿ ಕೈ ಕೊಡುತ್ತಾ ಮುಂಗಾರು?
ಗ್ರಾಮಸ್ಥರ ಪ್ರಕಾರ, ಕಳೆದ ಮೂರುರಿಂದ ನಾಲ್ಕು ವರ್ಷಗಳಿಂದ ಇದೇ ರೀತಿ ಪ್ರತಿಯೊಂದು ಶವಯಾತ್ರೆಯಲ್ಲೂ ಈ ಶ್ವಾನ ಕಾಣಿಸಿಕೊಳ್ಳುತ್ತಿದೆ. ಇದರ ನಿಷ್ಠೆ, ಮೌನದಲ್ಲಿರುವ ಕರುಣೆ ಮತ್ತು ಮಾನವರ ಭಾವನೆಗಳಿಗೆ ಸ್ಪಂದಿಸುವ ರೀತಿ ಜನರಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ.
ನಾಯಿಯ ನಿಷ್ಠೆ :
- ಶ್ವಾನ ಮನುಷ್ಯನ ಅತ್ಯಂತ ನಿಷ್ಠಾವಂತ ಸ್ನೇಹಿತ ಎಂದು ಹೇಳಲಾಗುತ್ತದೆ. ತನ್ನ ಮಾಲೀಕ ಅಥವಾ ಸುತ್ತಮುತ್ತಲಿನ ಜನರೊಂದಿಗೆ ಅದು ಬೆಳೆಸಿಕೊಳ್ಳುವ ಬಾಂಧವ್ಯ ಅಪರೂಪದ್ದು.
- ಹಲವು ಸಂದರ್ಭಗಳಲ್ಲಿ ಶ್ವಾನಗಳು ತಮ್ಮ ಪ್ರೀತಿ, ಕಾಳಜಿ ಮತ್ತು ಕೃತಜ್ಞತೆಯನ್ನು ವಿಶೇಷ ರೀತಿಯಲ್ಲಿ ತೋರಿಸುತ್ತವೆ.
- ಕೆಲವೊಮ್ಮೆ ಮನುಷ್ಯರಿಗಿಂತಲೂ ಹೆಚ್ಚು ಸಂವೇದನಾಶೀಲವಾಗಿ ವರ್ತಿಸುವುದು ಅವುಗಳ ವಿಶೇಷ ಗುಣವಾಗಿದೆ.
- ನಿಷ್ಠೆ ಮತ್ತು ಭಾವನೆಗಳ ವಿಷಯದಲ್ಲಿ ನಾಯಿಗಳು ಯಾವಾಗಲೂ ವಿಶಿಷ್ಟ ಸ್ಥಾನ ಪಡೆದಿವೆ.
ಸಂಪಾದಕೀಯ :
ಮೂಕಪ್ರಾಣಿಗಳಲ್ಲೂ ಭಾವನೆಗಳು, ನಿಷ್ಠೆ ಮತ್ತು ಕೃತಜ್ಞತೆ ಎಷ್ಟರ ಮಟ್ಟಿಗೆ ಅಡಗಿವೆ ಎಂಬುದನ್ನು ಇಂತಹ ಘಟನೆಗಳು ನೆನಪಿಸುತ್ತವೆ. ಕೆಲವೊಮ್ಮೆ ಮನುಷ್ಯರು ಮರೆತಿರುವ ಸಂವೇದನೆಗಳನ್ನು ಪ್ರಕೃತಿ ತನ್ನದೇ ರೀತಿಯಲ್ಲಿ ನಮಗೆ ತೋರಿಸುತ್ತದೆ ಎಂಬುದಕ್ಕೆ ಗದಗ ಜಿಲ್ಲೆಯ ಈ ಶ್ವಾನದ ವರ್ತನೆ ಜೀವಂತ ಉದಾಹರಣೆಯಾಗಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ





