ಧಾರವಾಡ : ಜಿಲ್ಲೆಯಲ್ಲಿ ನಡೆದ ಅಪ್ರಾಪ್ತೆಯ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕರ್ತವ್ಯ ಲೋಪ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ಇಲಾಖೆ ಆದೇಶಿಸಿದೆ.
ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆ ಗರಗ ಪೊಲೀಸ್ ಠಾಣೆಯ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ (CPI) ಶಿವಯೋಗಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಕಳೆದ ಮೇ 8ರಂದು ಗರಗ ಗ್ರಾಮದ ಅಪ್ರಾಪ್ತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬಂದಿದ್ದವು.
ದೂರು ದಾಖಲಿಸಲು ವಿಳಂಬ ಆರೋಪ :
ವಿಶೇಷವಾಗಿ ಪ್ರಕರಣದ ಸ್ವರೂಪವನ್ನು ಗಮನಿಸಿದರೂ ತಕ್ಷಣವೇ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆ ಕಾಯ್ದೆ (POCSO Act) ಅಡಿಯಲ್ಲಿ ದೂರು ದಾಖಲಿಸುವಲ್ಲಿ ವಿಳಂಬ ಮಾಡಲಾಗಿದೆ ಎಂಬ ಆರೋಪ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ.
ಇದನ್ನು ಓದಿ : ಪ್ರೀತಿಯ ಗೆಳತಿಗೆ ಗಿಫ್ಟ್; ಕಣ್ಣ ಮುಂದಿನ ದೃಶ್ಯ ನೋಡಿ ಪ್ರಿಯಕರನೇ ಶಾಕ್!
ಪ್ರಕರಣ ದಾಖಲಿಸುವಲ್ಲಿ ಅಗತ್ಯ ವೇಗ ತೋರಿಸದಿರುವುದು ಮಾತ್ರವಲ್ಲದೆ, ಆರಂಭಿಕ ಹಂತದಲ್ಲೇ ಪ್ರಕರಣವನ್ನು ಸಮರ್ಪಕವಾಗಿ ದಾಖಲಿಸದೆ ಬೇರೆ ರೀತಿಯಲ್ಲಿ ಇತ್ಯರ್ಥಪಡಿಸಲು ಪ್ರಯತ್ನ ನಡೆದಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದವು.
ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಶಿಸ್ತು ಕ್ರಮ :
ಇದೇ ಕಾರಣದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಗುಂಜನ್ ಆರ್ಯ ಅವರು ಘಟನೆಯ ಕುರಿತ ವರದಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಅಪ್ರಾಪ್ತೆಯ ಆತ್ಮಹತ್ಯೆ ಪ್ರಕರಣ ಬೆನ್ನಲ್ಲೇ ವಿವಿಧ ಸಂಘಟನೆಗಳು ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗರಗ ಗ್ರಾಮದಲ್ಲಿ ಪ್ರತಿಭಟನೆ ಕೂಡ ನಡೆಯಿತು.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
ಪ್ರತಿಭಟನಾಕಾರರು ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕ ಒತ್ತಡ ಹಾಗೂ ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ, ಪ್ರಾಥಮಿಕ ತನಿಖೆ ಆಧಾರದಲ್ಲಿ ಇನ್ಸ್‌ಪೆಕ್ಟರ್ ಶಿವಯೋಗಿ ಅವರನ್ನು ತಕ್ಷಣದಿಂದ ಅಮಾನತುಗೊಳಿಸುವ ಆದೇಶ ಹೊರಡಿಸಿದೆ.





