ಪೀರಿಯಡ್ಸ್ ಮುಂದೂಡುವ ಮಾತ್ರೆ ಬಳಸುವ ಮುನ್ನ ಮಹಿಳೆಯರೇ ಎಚ್ಚರ!

ಪೀರಿಯಡ್ಸ್ ಮುಂದೂಡುವ ಮಾತ್ರೆ ಬಳಸುವ ಮುನ್ನ ಮಹಿಳೆಯರೇ ಎಚ್ಚರ

ಆರೋಗ್ಯ : ಪೀರಿಯಡ್ಸ್ (Periods) ಮುಂದೂಡುವ ಮಾತ್ರೆ (Tablet) ಬಳಸುವ ಮುನ್ನ ಮಹಿಳೆಯರೇ ಒಮ್ಮೆ ಯೋಚಿಸಿ.! ಏಕೆಂದರೆ ಅದು ನಿಮ್ಮ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರುವ ಸಂಭವವಿದೆ.

ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಶುಭಕಾರ್ಯ, ಮದುವೆ, ದೇವಸ್ಥಾನದ ಪೂಜೆ ಅಥವಾ ದೂರದ ಪ್ರಯಾಣ ಇರುವ ಸಂದರ್ಭಗಳಲ್ಲಿ ಅನೇಕ ಮಹಿಳೆಯರು ಪೀರಿಯಡ್ಸ್‌ (Periods) ಮುಂದೂಡಲು ಮಾತ್ರೆಗಳನ್ನು ಬಳಸುವುದು ಸಾಮಾನ್ಯವಾಗಿದೆ.

ಗಂಭೀರ ಪರಿಣಾಮ ಬೀರುವ ಸಾಧ್ಯತೆ :

ಮೆಡಿಕಲ್ ಶಾಪ್‌ಗಳಲ್ಲಿ ಸುಲಭವಾಗಿ ದೊರೆಯುವ ಈ ಪೀರಿಯಡ್ಸ್ ಮುಂದೂಡುವ ಮಾತ್ರೆಗಳು ತಾತ್ಕಾಲಿಕ ಪರಿಹಾರ ನೀಡಿದರೂ, ವೈದ್ಯರ ಸಲಹೆ ಇಲ್ಲದೆ ಬಳಸಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಹಿಳೆಯ ದೇಹದಲ್ಲಿ ಋತುಚಕ್ರವು (Menstrual Cycle) ಹಾರ್ಮೋನ್‌ಗಳ ಸಮತೋಲನದ ಮೇಲೆ ಅವಲಂಬಿತವಾಗಿರುತ್ತದೆ. ಪೀರಿಯಡ್ಸ್ ಮುಂದೂಡುವ ಮಾತ್ರೆಗಳಲ್ಲಿ ಸಾಮಾನ್ಯವಾಗಿ ‘ಪ್ರೊಜೆಸ್ಟರಾನ್’ (Progesterone) ಹಾರ್ಮೋನ್ ಬಳಸಲಾಗುತ್ತದೆ.

ಈ ಹಾರ್ಮೋನ್ ಪ್ರಮಾಣವನ್ನು ಕೃತಕವಾಗಿ ಹೆಚ್ಚಿಸುವ ಮೂಲಕ ಪೀರಿಯಡ್ಸ್ ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ. ಆದರೆ ಮಾತ್ರೆ ಸೇವನೆ ನಿಲ್ಲಿಸಿದ ಬಳಿಕ ಹಾರ್ಮೋನ್ ಮಟ್ಟದಲ್ಲಿ ಏಕಾಏಕಿ ಬದಲಾವಣೆ ಉಂಟಾಗಿ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಆರೋಗ್ಯ ತಜ್ಞರ ಪ್ರಕಾರ, ಪದೇ ಪದೇ ಈ ರೀತಿಯ ಹಾರ್ಮೋನ್ ಮಾತ್ರೆಗಳನ್ನು ಬಳಸುವುದರಿಂದ ದೇಹದ ನೈಸರ್ಗಿಕ ಹಾರ್ಮೋನ್ ಸಮತೋಲನ (Hormonal Balance) ಹದಗೆಡುವ ಸಾಧ್ಯತೆ ಇದೆ.

ಇದರ ಪರಿಣಾಮವಾಗಿ ಮುಂದಿನ ತಿಂಗಳುಗಳಲ್ಲಿ ಪೀರಿಯಡ್ಸ್ ಸರಿಯಾದ ಸಮಯಕ್ಕೆ ಬಾರದಿರುವುದು, ಅತಿಯಾದ ಕಿರಿಕಿರಿ, ಮೂಡ್ ಸ್ವಿಂಗ್ಸ್‌, ಒತ್ತಡ ಮತ್ತು ದೌರ್ಬಲ್ಯ ಕಾಣಿಸಿಕೊಳ್ಳಬಹುದು.

ರಕ್ತ ಹೆಪ್ಪುಗಟ್ಟುವಿಕೆ :

ಇದೇ ವೇಳೆ, ಕೆಲವು ಮಹಿಳೆಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Blood Clots) ಅಪಾಯವೂ ಹೆಚ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ರಕ್ತನಾಳಗಳಲ್ಲಿ ಗಡ್ಡೆ ಉಂಟಾದರೆ ಅದು ಹೃದಯ, ಶ್ವಾಸಕೋಶ ಅಥವಾ ಮೆದುಳಿಗೆ ತಲುಪಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.

ಇದನ್ನು ಓದಿ : ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಆಶಾಕಿರಣ; 7 ನಿಮಿಷದ ಇಮ್ಯುನೊಥೆರಪಿ ಇಂಜೆಕ್ಷನ್ ಭಾರತದಲ್ಲಿ ಬಿಡುಗಡೆ.

ಹೀಗಾಗಿ ಹಾರ್ಮೋನ್ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ಬಳಸಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಮತ್ತೊಂದೆಡೆ, ಪದೇ ಪದೇ ಮಾತ್ರೆ ಸೇವನೆಯಿಂದ ಭವಿಷ್ಯದಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು (Fertility Issues) ಎದುರಾಗುವ ಸಾಧ್ಯತೆಯೂ ಇದೆ. ಕೆಲವು ಸಂದರ್ಭಗಳಲ್ಲಿ ತೀವ್ರ ಹೊಟ್ಟೆನೋವು, ಅಧಿಕ ರಕ್ತಸ್ರಾವ ಮತ್ತು ವಾರಗಟ್ಟಲೆ ಪೀರಿಯಡ್ಸ್ ನಿಲ್ಲದಿರುವಂತಹ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು.

ಪೀರಿಯಡ್ಸ್ ಮುಂದೂಡುವ ಮಾತ್ರೆ; ವೈದ್ಯರ ಎಚ್ಚರಿಕೆ :

ವೈದ್ಯರ ಪ್ರಕಾರ, ಲಿವರ್ (Liver) ಮತ್ತು ಕಿಡ್ನಿಗಳ ಮೇಲೂ ಈ ಮಾತ್ರೆಗಳ ಪರಿಣಾಮ ಬೀಳಬಹುದು. ದೇಹದಲ್ಲಿ ಹಾರ್ಮೋನ್ ಪ್ರಕ್ರಿಯೆ ಹೆಚ್ಚಾಗುವುದರಿಂದ ಯಕೃತ್ತಿಗೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಈಗಾಗಲೇ ಆರೋಗ್ಯ ಸಮಸ್ಯೆ ಇರುವವರು ಇಂತಹ ಮಾತ್ರೆಗಳನ್ನು ಸೇವಿಸುವ ಮುನ್ನ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯವಾಗಿದೆ.

ಈ ಮಾತ್ರೆಗಳನ್ನು ಬಳಸಿದ ಬಳಿಕ ಎದೆನೋವು, ಉಸಿರಾಟದ ತೊಂದರೆ, ಕಾಲುಗಳಲ್ಲಿ ಬಾವು ಅಥವಾ ತೀವ್ರ ತಲೆನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಈ ಸುದ್ದಿಯನ್ನು ಓದಿ : ರಾತ್ರಿ ಮಲಗುವ ಮುನ್ನ 1 ಎಸಳು ಬೆಳ್ಳುಳ್ಳಿ ತಿಂದರೆ ಏನಾಗುತ್ತೆ? ಇಲ್ಲಿದೆ ಆರೋಗ್ಯಕರ ಲಾಭಗಳು!

ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರ ಪದ್ಧತಿ ಹಾಗೂ ವೈದ್ಯರ ಸಲಹೆಯೊಂದಿಗೆ ಮಾತ್ರ ಋತುಚಕ್ರಕ್ಕೆ ಸಂಬಂಧಿಸಿದ ಔಷಧಿಗಳನ್ನು ಬಳಸುವುದು ಸುರಕ್ಷಿತ ಎಂದು ವೈದ್ಯರು ಹೇಳಿದ್ದಾರೆ.

ತಾತ್ಕಾಲಿಕ ಸೌಲಭ್ಯಕ್ಕಾಗಿ ಸ್ವಯಂ ಔಷಧಿ ಸೇವನೆ (Self Medication) ಮಾಡುವುದು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.

ಆರೋಗ್ಯ ಸಲಹೆ :

ವೈದ್ಯರ ಸಲಹೆಯಿಲ್ಲದೆ ಇಂತಹ ಔಷಧಿ ಸೇವಿಸುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ. ಇತ್ತೀಚೆಗೆ 18 ವರ್ಷದ ಬಾಲಕಿಯೊಬ್ಬಳು ಪೀರಿಯಡ್ಸ್ ಮುಂದೂಡುವ ಮಾತ್ರೆ ಸೇವಿಸಿದ ಬಳಿಕ ಡೀಪ್ ಸಿರೆ ಥ್ರಂಬೋಸಿಸ್‌ (DVT) ಸಮಸ್ಯೆಗೆ ಒಳಗಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೈದ್ಯರ ಪ್ರಕಾರ, ಈ ಮಾತ್ರೆಗಳು ದೇಹದಲ್ಲಿ ಹಾರ್ಮೋನ್ ಬದಲಾವಣೆ ಉಂಟುಮಾಡಿ ರಕ್ತ ಹೆಪ್ಪುಗಟ್ಟುವ (Blood Clots) ಅಪಾಯವನ್ನು ಹೆಚ್ಚಿಸಬಹುದು.

ಕಾಲು ನೋವು, ಊತ, ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಪ್ರತಿಯೊಬ್ಬರ ದೇಹ ವಿಭಿನ್ನವಾಗಿರುವುದರಿಂದ ಸ್ತ್ರೀರೋಗ ತಜ್ಞರ ಸಲಹೆಯಿಲ್ಲದೆ ಇಂತಹ ಔಷಧಿಗಳನ್ನು ಬಳಸಬಾರದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.


Disclaimer: ಈ ಲೇಖನವು (ಪೀರಿಯಡ್ಸ್ ಮುಂದೂಡುವ ಮಾತ್ರೆ) ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ ಸಿದ್ಧಪಡಿಸಲಾಗಿದೆ. ಯಾವುದೇ ಔಷಧಿ ಅಥವಾ ಹಾರ್ಮೋನ್ ಮಾತ್ರೆ ಬಳಸುವ ಮೊದಲು ಅರ್ಹ ವೈದ್ಯರ ಸಲಹೆ ಪಡೆಯುವುದು ಅವಶ್ಯಕ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top