ಬೆಂಗಳೂರು: ಮಹಿಳಾ ವಕೀಲೆಯೊಬ್ಬರ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಮಹಿಳಾ ಪಿಎಸ್‌ಐ) ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ನ್ಯಾಯಾಲಯದ ಮುಂದೆ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸದೇ ಇರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದಲ್ಲದೇ ಅರ್ಜಿಯನ್ನು ವಜಾಗೊಳಿಸಿದೆ.
ರಸ್ತೆಯಲ್ಲಿ ನಡೆದ ಜಗಳವೊಂದರ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳಾ ವಕೀಲೆಯೊಬ್ಬರ ಮೇಲೆ ನಡೆದ ಅಹಿತಕರ ಘಟನೆಯಿಂದ ಈ ಪ್ರಕರಣ ಆರಂಭವಾಗಿತ್ತು. ವಕೀಲೆಯ ದೂರಿನ ಆಧಾರದ ಮೇಲೆ ಸಂಬಂಧಿತ ಪೊಲೀಸ್ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಬಳಿಕ ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.
ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವೇನು?
ಪ್ರಕರಣದ ವಿಚಾರಣೆ ವೇಳೆ, ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಹೈಕೋರ್ಟ್‌ನ ಆದೇಶದ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು ಎಂಬ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸದೇ ಇರುವುದನ್ನು ನ್ಯಾಯಪೀಠ ಗಮನಿಸಿದೆ.
ಈ ವಿಚಾರವನ್ನು ಮರೆಮಾಚಿ ಮಹಿಳಾ ಪಿಎಸ್‌ಐ ಬೇರೆ ಪೀಠದ ಮುಂದೆ ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ಪಡೆದಿರುವುದು ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಯಿತು.
ನ್ಯಾಯಪೀಠ, ನ್ಯಾಯಾಂಗದ ಮುಂದೆ ಸಂಪೂರ್ಣ ಸತ್ಯಾಂಶವನ್ನು ಮಂಡಿಸುವುದು ಪ್ರತಿಯೊಬ್ಬ ಅರ್ಜಿದಾರರ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದೆ. ಮಹತ್ವದ ಮಾಹಿತಿಯನ್ನು ಮುಚ್ಚಿಡುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಠಿಣವಾಗಿ ಹೇಳಿದೆ.
ಪ್ರಕರಣದ ಹಿನ್ನೆಲೆ :
ಮಹಿಳಾ ವಕೀಲೆಯೊಬ್ಬರು ರಸ್ತೆಯಲ್ಲಿ ನಡೆದ ಜಗಳದ ವಿಷಯವಾಗಿ ದೂರನ್ನು ದಾಖಲಿಸಲು ಠಾಣೆಗೆ ಬಂದ ಸಂದರ್ಭದಲ್ಲಿ ತಮ್ಮನ್ನು ಬಹು ಸಮಯದವರೆಗೆ ಕಾಯಿಸಲಾಯಿತು ಎಂದು ಆಕ್ರೋಶಗೊಂಡು ಠಾಣೆಯ ಟೇಬಲ್ ಮೇಲಿದ್ದ ಕಡಿತಗಳನ್ನು ಕೆಳಗೆ ಚಲ್ಲಿದ ಹಿನ್ನಲೆಯಲ್ಲಿ ಮಹಿಳಾ ಪಿಎಸ್‌ಐ ತಮ್ಮ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಇದನ್ನು ಓದಿ : ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ತೀರ್ಪು; ಅರ್ಹತೆ ಮರೆಮಾಚಿ ಉದ್ಯೋಗ ಪಡೆದರೆ ಸೇವೆ ರದ್ದು!
ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳೂ ತನಿಖೆಯ ಭಾಗವಾಗಿದ್ದು, ಘಟನೆಯ ನಿಜಾಂಶವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ನ್ಯಾಯಾಲಯವು ಇಲಾಖಾ ತನಿಖೆಯನ್ನು ಕೂಡ ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮಹಿಳಾ ಪಿಎಸ್‌ಐಗೆ 8 ವಾರಗಳಲ್ಲಿ ದಂಡ ಪಾವತಿಸಲು ಸೂಚನೆ :
High Court ವಿಧಿಸಿರುವ 1 ಲಕ್ಷ ರೂಪಾಯಿ ದಂಡವನ್ನು ಎಂಟು ವಾರಗಳೊಳಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಆದೇಶಿಸಲಾಗಿದೆ. ಜೊತೆಗೆ ತನಿಖೆಯ ಪ್ರಗತಿ ವರದಿಯನ್ನು ಸಂಬಂಧಿತ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಕಾನೂನಿನ ಮುಂದೆ ಎಲ್ಲರೂ ಸಮಾನ :
ಈ ಆದೇಶದ ಮೂಲಕ ನ್ಯಾಯಾಲಯ ಮಹತ್ವದ ಸಂದೇಶವೊಂದನ್ನು ನೀಡಿದೆ. ಯಾವುದೇ ವ್ಯಕ್ತಿ ಅಥವಾ ಅಧಿಕಾರಿಯಾಗಿದ್ದರೂ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು.
ನ್ಯಾಯಾಂಗದ ಮುಂದೆ ಸತ್ಯಾಂಶಗಳನ್ನು ಮರೆಮಾಚುವ ಪ್ರಯತ್ನಗಳು ಅಥವಾ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುವ ಕ್ರಮಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ





