ಚಿಕ್ಕೋಡಿ : ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಸಂಸ್ಥೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಬುಧವಾರ (ದಿ.30) ಬೆಳಗ್ಗೆಯೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಹಶೀಲ್ದಾರ್ಗೆ ಸಂಬಂಧಿಸಿದ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಈ ಪರಿಶೀಲನಾ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದ್ದು, ಅಧಿಕಾರಿಗಳು ವಿವಿಧ ದಾಖಲೆಗಳು ಹಾಗೂ ಆಸ್ತಿ-ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿದ್ದಾರೆ.
ಇದೇ ವೇಳೆ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ತಹಶೀಲ್ದಾರ್ ಸುರೇಶ್ ಮುಂಜೆ ಅವರ ಪತ್ನಿ ಅವರ ತವರು ಮನೆ ಹಾಗೂ ಅವರ ತಂದೆಯವರ ನಿವಾಸದ ಮೇಲೂ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದೆ.
ಪತ್ನಿ ತಂದೆಯವರ ನಿಕಟ ಸಂಬಂಧ ಹೊಂದಿರುವ ಸೊಸೈಟಿಯಲ್ಲಿಯೂ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ. ಸೊಸೈಟಿಯ ಹಣಕಾಸಿನ ವ್ಯವಹಾರಗಳು, ಆಸ್ತಿ ವಿವರಗಳು ಹಾಗೂ ಪ್ರಮುಖ ದಾಖಲೆಪತ್ರಗಳನ್ನು ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದ್ದಾರೆ.
ಮನೆ ಹಾಗೂ ಸೊಸೈಟಿಯಲ್ಲಿರುವ ವಿವಿಧ ದಾಖಲೆಗಳು ಮತ್ತು ಆಸ್ತಿ-ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಕಾರ್ಯಾಚರಣೆ ವೇಳೆ ಯಾವುದೇ ಮಹತ್ವದ ದಾಖಲೆಗಳು ಅಥವಾ ಆಸ್ತಿಪಾಸ್ತಿಗಳ ಕುರಿತು ಅಧಿಕೃತವಾಗಿ ಏನು ಪತ್ತೆಯಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ನಿಪ್ಪಾಣಿ ತಹಶೀಲ್ದಾರ್ ಮನೆ, ಕಚೇರಿಯಲ್ಲಿ ಲೋಕಾಯುಕ್ತ ದಾಳಿ :
ಬೆಳಗಾವಿ ಲೋಕಾಯುಕ್ತ ಎಸ್ಪಿ ಪ್ರಸನ್ನ ದೇಸಾಯಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ. ನಿಪ್ಪಾಣಿ, ಅಥಣಿ ಹಾಗೂ ಮೂಡಲಗಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಏಕಕಾಲದಲ್ಲಿ ಪರಿಶೀಲನಾ ಕಾರ್ಯ ನಡೆಸಲಾಗಿದೆ.
ಅಧಿಕಾರಿಗಳು ತಹಶೀಲ್ದಾರ್ ಸುರೇಶ್ ಮುಂಜೆ ಅವರಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಆಸ್ತಿಗಳ ಮೂಲ, ಹಣಕಾಸಿನ ವ್ಯವಹಾರಗಳು ಹಾಗೂ ಲಭ್ಯವಿರುವ ದಾಖಲೆಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.
Courtesy : Udayavani
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
Disclaimer : ಈ ವರದಿಯಲ್ಲಿನ ಆರೋಪಗಳು ತನಿಖೆಗೆ ಒಳಪಟ್ಟಿರುವ ವಿಷಯಗಳಾಗಿವೆ. ಅಧಿಕೃತ ತನಿಖೆಯ ಅಂತಿಮ ವರದಿ ಹೊರಬರುವವರೆಗೆ ಯಾರನ್ನೂ ತಪ್ಪಿತಸ್ಥರೆಂದು ಪರಿಗಣಿಸಲಾಗುವುದಿಲ್ಲ. ಲಭ್ಯವಾದ ಮಾಹಿತಿ ಮತ್ತು ಮೂಲಗಳ ಆಧಾರದ ಮೇಲೆ ಈ ಸುದ್ದಿ ಪ್ರಕಟಿಸಲಾಗಿದೆ.









