ಘಟಪ್ರಭಾ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪೊಲೀಸರು ಸಾರ್ವಜನಿಕರು ಕಳೆದುಕೊಂಡಿದ್ದ ಅಥವಾ ಕಳ್ಳತನವಾಗಿದ್ದ ಮೊಬೈಲ್ಗಳನ್ನು ಪತ್ತೆಹಚ್ಚಿ ಮರಳಿ ವಾರಸುದಾರರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಹಾಗೂ ಕಾರ್ಯಕ್ಷಮತೆಗೆ ಮಾದರಿಯಾಗಿದ್ದಾರೆ.
ಕೇಂದ್ರ ಸರ್ಕಾರದ ಸಿಇಐಆರ್ (CEIR – Central Equipment Identity Register) ತಂತ್ರಜ್ಞಾನ ಬಳಸಿ ಕಳುವಾಗಿದ್ದ ಹಾಗೂ ಕಳೆದುಹೋಗಿದ್ದ ಒಟ್ಟು 27 ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ, ಮಂಗಳವಾರ ಅವುಗಳನ್ನು ನಿಜವಾದ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದಾರೆ.
ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವರು ತಮ್ಮ ಮೊಬೈಲ್ ಕಳೆದುಹೋಗಿರುವ ಬಗ್ಗೆ ದೂರು (FIR) ದಾಖಲಿಸಿದ್ದರು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಘಟಪ್ರಭಾ ಪೊಲೀಸರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ CEIR ವ್ಯವಸ್ಥೆಯ ಸಹಾಯದಿಂದ ಮೊಬೈಲ್ಗಳ IMEI ಸಂಖ್ಯೆಯನ್ನು ಟ್ರ್ಯಾಕ್ ಮಾಡಿ ವಿವಿಧ ಕಡೆಗಳಲ್ಲಿ ಬಳಕೆಯಾಗುತ್ತಿದ್ದ ಮೊಬೈಲ್ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಮೊದಲ ಬಾರಿ ಅಲ್ಲ :
ವಿಶೇಷವೆಂದರೆ ಹೀಗೆ ಕಳುವಾಗಿದ್ದ ಹಾಗೂ ಕಳೆದುಹೋಗಿದ್ದ ಮೊಬೈಲ್ಗಳನ್ನು ನಿಜವಾದ ವಾರಸುದಾರರಿಗೆ ಹಸ್ತಾಂತರಿಸುತ್ತಿರುವುದು ಇದೇ ಮೊದಲ ಬಾರಿ ಅಲ್ಲ.
ಕಳೆದ ತಿಂಗಳ ಹಿಂದೆಯೂ ಸಹ ಘಟಪ್ರಭಾ ಪೊಲೀಸರು ಇದೇ CEIR ತಂತ್ರಜ್ಞಾನ ಬಳಸಿ ಸುಮಾರು 15 ಕಳೆದುಹೋಗಿದ್ದ ಮೊಬೈಲ್ಗಳನ್ನು ಪತ್ತೆಹಚ್ಚಿ ಅವುಗಳನ್ನು ನಿಜವಾದ ಮಾಲೀಕರಿಗೆ ಯಶಸ್ವಿಯಾಗಿ ಹಸ್ತಾಂತರಿಸಿದ್ದರು.
ಇದೀಗ ಮತ್ತೊಮ್ಮೆ 27 ಮೊಬೈಲ್ಗಳನ್ನು ಪತ್ತೆಹಚ್ಚಿರುವುದು ಪೊಲೀಸರ ತಾಂತ್ರಿಕ ಕಾರ್ಯಕ್ಷಮತೆಯನ್ನು ಮತ್ತಷ್ಟು ಸಾಬೀತುಪಡಿಸಿದೆ.
ಈ ಸುದ್ದಿಯನ್ನು ಓದಿ : ದಾವಣಗೆರೆಯಲ್ಲಿ 26 ವರ್ಷದ ಬಾಡಿ ಬಿಲ್ಡರ್ ಹೃದಯಾಘಾತಕ್ಕೆ ಬಲಿ; ಯುವಕರಲ್ಲಿ ಹೆಚ್ಚುತ್ತಿದೆ ಆತಂಕ.
ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ,
- 2022 – 03 ಮೊಬೈಲ್ಗಳು,
- 2023 – 04 ಮೊಬೈಲ್ಗಳು,
- 2024 – 07 ಮೊಬೈಲ್ಗಳು,
- 2025 – 07 ಮೊಬೈಲ್ಗಳು ಮತ್ತು
- 2026 – 06 ಮೊಬೈಲ್ಗಳು ಸೇರಿದಂತೆ ಒಟ್ಟು 27 ಮೊಬೈಲ್ಗಳನ್ನು ಪತ್ತೆಹಚ್ಚಲಾಗಿದೆ.
ಹಲವು ವರ್ಷಗಳಿಂದ ಕಳೆದುಹೋಗಿದ್ದ ಮೊಬೈಲ್ಗಳನ್ನು ತಾಂತ್ರಿಕ ಸಹಾಯದಿಂದ ಪತ್ತೆ ಮಾಡಿ ಮಾಲೀಕರಿಗೆ ಮರಳಿ ನೀಡಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ :
ಮಂಗಳವಾರ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪತ್ತೆಯಾದ 27 ಮೊಬೈಲ್ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದ ಹಿನ್ನಲೆಯಲ್ಲಿ ಮೊಬೈಲ್ ಮರಳಿ ಪಡೆದ ವಾರಸುದಾರರು ಮತ್ತು ಸಾರ್ವಜನಿಕರು ಘಟಪ್ರಭಾ ಪೊಲೀಸರ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದರು.
ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ನೆರವಾಗುತ್ತಿರುವ ಪೊಲೀಸ್ ಇಲಾಖೆ, ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಜನಸ್ನೇಹಿ ಕಾರ್ಯಗಳಿಂದಲೂ ಗಮನ ಸೆಳೆಯುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನು ಓದಿ : ಚಿಕ್ಕೋಡಿ : ಮಕ್ಕಳೊಂದಿಗೆ ನೀಚ ಕೃತ್ಯ ತೋರಿದ ಆರೋಪ; ಕನ್ನಡ ಶಿಕ್ಷಕನ ಅಮಾನತಿಗೆ ಡಿಡಿಪಿಐ ಆದೇಶ.
ಈ ಕಾರ್ಯಾಚರಣೆಯನ್ನು ಇನ್ಸ್ಪೆಕ್ಟರ್ H.D. ಮುಲ್ಲಾ ಅವರ ಮಾರ್ಗದರ್ಶನದಲ್ಲಿ, PSI S.R. ಕಣವಿ, PSI S.A. ಜಮಖಂಡಿ, ASI P.M. ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆರ್.ಆರ್. ಗಿಡ್ಡಪ್ಪಗೋಳ, ಬಿ.ಎಸ್. ನಾಯಿಕ, ವಿ.ಎಸ್. ಕೋಳಿ ಹಾಗೂ ಎಸ್.ಎಚ್. ದೇವರ ಅವರ ತಂಡ ಯಶಸ್ವಿಯಾಗಿ ನಿರ್ವಹಿಸಿದೆ.
ಮೊಬೈಲ್ಗಳನ್ನು ಹಸ್ತಾಂತರಿಸಿದ ಘಟಪ್ರಭಾ ಪೊಲೀಸ್ :
CEIR ತಂತ್ರಜ್ಞಾನ ಎಂದರೇನು?
CEIR (Central Equipment Identity Register) ಎಂಬುದು ಕೇಂದ್ರ ಸರ್ಕಾರ ರೂಪಿಸಿರುವ ವಿಶೇಷ ಡಿಜಿಟಲ್ ವ್ಯವಸ್ಥೆಯಾಗಿದ್ದು, ಮೊಬೈಲ್ ಕಳುವಾದಾಗ ಅಥವಾ ಕಳೆದುಹೋದಾಗ ಅದರ IMEI ಸಂಖ್ಯೆಯನ್ನು ಬ್ಲಾಕ್ ಮಾಡಿ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.
ಇದರ ಮೂಲಕ ಕಳ್ಳತನವಾದ ಮೊಬೈಲ್ಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಮರಳಿ ನೀಡುವ ಅವಕಾಶ ಹೆಚ್ಚುತ್ತದೆ.
ಪೊಲೀಸರು ಸಾರ್ವಜನಿಕರಿಗೆ ಈ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಮೊಬೈಲ್ ಕಳೆದುಹೋದ ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ಭೇಟಿ ನೀಡಿ CEIR ಪೋರ್ಟಲ್ ಮೂಲಕ ದೂರು ದಾಖಲಿಸಿದರೆ ಮೊಬೈಲ್ ಪತ್ತೆಯಾಗುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದ್ದಾರೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ







