ಗ್ಯಾಸ್ಟ್ರಿಕ್ ಸಮಸ್ಯೆ ಪದೇಪದೇ ಕಾಡುತ್ತಿದೆಯಾ? ಪ್ರತಿದಿನದ ಈ ಸಣ್ಣ ಅಭ್ಯಾಸದಿಂದ ಮುಕ್ತಿ.

ಗ್ಯಾಸ್ಟ್ರಿಕ್ ಸಮಸ್ಯೆ ಪದೇಪದೇ ಕಾಡುತ್ತಿದೆಯಾ?

ಆರೋಗ್ಯ ಮಾಹಿತಿ : ನಿಮ್ಮನ್ನು ಗ್ಯಾಸ್ಟ್ರಿಕ್ ಸಮಸ್ಯೆ (Gastric problem) ಪದೇಪದೇ ಕಾಡುತ್ತಿದೆಯಾ? ಹಾಗಾದ್ರೆ ಈ ಸಮಸ್ಯೆಗೆ ಪ್ರತಿದಿನ ಈ ಸಣ್ಣ ಅಭ್ಯಾಸಗಳು ಈ ಸಮಸ್ಯೆಯಿಂದ ಮುಕ್ತಿ ಕೊಡಿಸುವುದರ ಜೊತೆ ನಿಮ್ಮ ಹೊಟ್ಟೆ ಆರೋಗ್ಯ ಕಾಪಾಡಬಹುದು. ಏನಿವು ಆ ಸಣ್ಣ ಅಭ್ಯಾಸಗಳು? ಬನ್ನಿ ಆ ಬಗ್ಗೆ ತಿಳಿಯೋಣ.!

ಇತ್ತೀಚಿನ ದಿನಗಳಲ್ಲಿ ಹಲವರು ಎದುರಿಸುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಗ್ಯಾಸ್ಟ್ರಿಕ್ (Gastritis) ಅಥವಾ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಸಮಸ್ಯೆ ಪ್ರಮುಖವಾಗಿದೆ.

ಈ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣಗಳು :

ಸರಿಯಾದ ಸಮಯಕ್ಕೆ ಆಹಾರ ಸೇವಿಸದಿರುವುದು, ಅತಿಯಾಗಿ ಜಂಕ್ ಫುಡ್ ತಿನ್ನುವುದು, ತ್ವರಿತವಾಗಿ ಊಟ ಮುಗಿಸುವ ಅಭ್ಯಾಸ ಹಾಗೂ ಜೀವನಶೈಲಿಯ ಕೆಲವು ಸಣ್ಣ ತಪ್ಪುಗಳು ಈ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಆದರೆ ದಿನನಿತ್ಯದ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಂಡರೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಪರಿಹಾರಗಳು :

  • ಬೆಳಗ್ಗೆ ಎದ್ದ ಬಳಿಕ ಬಹಳ ಹೊತ್ತು ಖಾಲಿ ಹೊಟ್ಟೆಯಲ್ಲಿ ಇರುವುದನ್ನು ತಪ್ಪಿಸುವುದು ಮುಖ್ಯ.
  • ಸಾಮಾನ್ಯವಾಗಿ ಎದ್ದ ನಂತರ ಅರ್ಧ ಗಂಟೆಯಿಂದ ಒಂದು ಗಂಟೆಯೊಳಗೆ ಆರೋಗ್ಯಕರವಾದ ಆಹಾರ ಸೇವಿಸುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
  • ದೀರ್ಘ ಸಮಯ ಹೊಟ್ಟೆ ಖಾಲಿ ಇದ್ದರೆ ಕೆಲವರಿಗೆ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಇರಬೇಡಿ.

ಹಾಗೆಯೇ ಇನ್ನು ಊಟ ಮಾಡುವಾಗಲೂ ಕೆಲವು ವಿಷಯಗಳನ್ನು ಗಮನಿಸಬೇಕು. ಒಂದೇ ಬಾರಿ ಬೇಗ ಬೇಗನೆ ಊಟ ಮಾಡುವ ಬದಲು ನಿಧಾನವಾಗಿ ಸಣ್ಣ ತುತ್ತುಗಳಲ್ಲಿ ಆಹಾರ ಸೇವಿಸುವುದು ಉತ್ತಮ. ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

ತಜ್ಞರ ಪ್ರಕಾರ, ಪ್ರತಿಯೊಂದು ತುಂಡನ್ನೂ ಕನಿಷ್ಠ 20ರಿಂದ 30 ಬಾರಿ ಅಗಿದು ತಿನ್ನುವ ಅಭ್ಯಾಸ ಹೊಟ್ಟೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಕೆಲವು ಆಹಾರ ಪದಾರ್ಥಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಹೊಂದಿಕೆಯಾಗುವುದಿಲ್ಲ. ಕೆಲವರಿಗೆ ಗೆಣಸು, ಮೊಟ್ಟೆ (Egg), ಮಂಡಕ್ಕಿ ಅಥವಾ ಇತರ ಕೆಲವು ಆಹಾರಗಳಿಂದ ಗ್ಯಾಸ್ ಸಮಸ್ಯೆ ಉಂಟಾಗಬಹುದು. ಯಾವ ಆಹಾರದಿಂದ ಸಮಸ್ಯೆ ಆಗುತ್ತದೆ ಎಂಬುದನ್ನು ಗಮನಿಸಿ, ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಅಂತಹ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ.

ಇದರ ಜೊತೆಗೆ ದಿನವಿಡೀ ಸಾಕಷ್ಟು ನೀರು ಕುಡಿಯುವ ಅಭ್ಯಾಸ ಕೂಡ ಮುಖ್ಯವಾಗಿದೆ. ಊಟ ಮಾಡಿದ ತಕ್ಷಣ ಹೆಚ್ಚು ಹೊತ್ತು ಒಂದೇ ಕಡೆ ಕುಳಿತುಕೊಳ್ಳುವ ಬದಲು ಸ್ವಲ್ಪ ಹೊತ್ತು ನಡೆಯುವುದು ಜೀರ್ಣಕ್ರಿಯೆ ಸರಾಗವಾಗಲು ಸಹಾಯ ಮಾಡುತ್ತದೆ.

ಆರೋಗ್ಯಕರ ಆಹಾರ ಪದ್ಧತಿ ಮತ್ತು ಸಣ್ಣ ಜೀವನಶೈಲಿ ಬದಲಾವಣೆಗಳು ಹೊಟ್ಟೆ ಸಂಬಂಧಿತ ಸಮಸ್ಯೆಗಳನ್ನು ದೂರವಿಡಲು ಪರಿಣಾಮಕಾರಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಗ್ಯಾಸ್ಟ್ರಿಕ್ ಸಮಸ್ಯೆ ಏಂದರೇನು?

ಗ್ಯಾಸ್ಟ್ರಿಕ್ ಸಮಸ್ಯೆ ಎಂದರೆ ಹೊಟ್ಟೆಯಲ್ಲಿ ಅತಿಯಾಗಿ ಆಮ್ಲ (acid) ಉತ್ಪತ್ತಿಯಾಗುವುದು ಅಥವಾ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಿ ಗ್ಯಾಸ್ ತುಂಬುವ ಸ್ಥಿತಿ. ಇದರಿಂದ ಹೊಟ್ಟೆ ಉಬ್ಬರ, ಎದೆ ಉರಿಯುವುದು, ಹೊಟ್ಟೆ ನೋವು, ಆಗಾಗ ಡಕ್ಕರ್ ಬರುವುದು ಹಾಗೂ ಅಜೀರ್ಣದಂತಹ ಸಮಸ್ಯೆಗಳು ಕಾಣಿಸಬಹುದು.

ಅಲ್ಲದ ಸಮಯದಲ್ಲಿ ಊಟ ಮಾಡುವುದು, ಹೆಚ್ಚು ಖಾರ ಅಥವಾ ಎಣ್ಣೆಯುಕ್ತ ಆಹಾರ ಸೇವಿಸುವುದು, ಒತ್ತಡದ ಜೀವನಶೈಲಿ ಮತ್ತು ನಿದ್ರೆ ಕೊರತೆ ಇವು ಸಾಮಾನ್ಯ ಕಾರಣಗಳಾಗಿವೆ.

ಸರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯಕರ ದಿನಚರಿ ಪಾಲಿಸಿದರೆ ಈ ಸಮಸ್ಯೆಯನ್ನು ಬಹಳ ಮಟ್ಟಿಗೆ ನಿಯಂತ್ರಿಸಬಹುದು. ನಿರಂತರವಾಗಿ ಸಮಸ್ಯೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ 


Disclaimer: ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಸಲಹೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ನಿರಂತರ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top