ಬೆಂಗಳೂರು : ಸಂಪುಟ ಸೇರ್ಪಡೆಗೆ ಜಮೀರ್ ಅಹ್ಮದ್ ಭಾರಿ ಕಸರತ್ತು ನಡೆಸುತ್ತಿದ್ದು, ಸದ್ಯ ಹೈಕಮಾಂಡ್ ಒಪ್ಪಿಗೆ ಸಿಗುತ್ತಾ? ಅನ್ನುವ ಪ್ರಶ್ನೆ ಉದ್ಬವಿಸಿದ್ದು, ಹೀಗಾಗಿ ಕಾಂಗ್ರೆಸ್ನಲ್ಲಿ ಭಾರೀ ಕುತೂಹಲ ಮೂಡಿಸಿದೆ ಎಂದು ಹೇಳಲಾಗುತ್ತಿದೆ. ಮೊದಲನೇ ಸಂಪುಟ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಅವರಿಗೆ ಸ್ಥಾನ ದೊರಕಿರಲಿಲ್ಲ.
ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತೆ ರಾಜ್ಯ ರಾಜಕೀಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದು, ಇದೀಗ ಡಿಕೆ ಶಿವಕುಮಾರ್ ಅವರ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ.
ಮೊದಲ ಹಂತದ ಸಂಪುಟ ರಚನೆಯಲ್ಲಿ ಸ್ಥಾನ ಸಿಗದೆ ಹಿನ್ನಡೆ ಅನುಭವಿಸಿದ್ದ ಅವರು, ಈಗ ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಕೊಳ್ಳಲು ವಿವಿಧ ಮಟ್ಟದಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಕ್ರೈಂ ಸುದ್ದಿ ಓದಿ : ಚಿಕ್ಕೋಡಿ : ಮಕ್ಕಳೊಂದಿಗೆ ನೀಚ ಕೃತ್ಯ ತೋರಿದ ಆರೋಪ; ಕನ್ನಡ ಶಿಕ್ಷಕನ ಅಮಾನತಿಗೆ ಡಿಡಿಪಿಐ ಆದೇಶ.
ಆದರೆ ಪಕ್ಷದ ವಿರುದ್ಧ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜಮೀರ್ ಅವರಿಗೆ ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಉಪ ಚುನಾವಣೆ ವಿಚಾರವೇ ಹಿನ್ನಡೆಗೆ ಕಾರಣ?
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳು ಜಮೀರ್ ಅವರಿಗೆ ರಾಜಕೀಯವಾಗಿ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಆ ಬೆಳವಣಿಗೆಗಳ ಪರಿಣಾಮವೇ ಮೊದಲ ಹಂತದ ಸಂಪುಟದಲ್ಲಿ ಸ್ಥಾನ ಸಿಗದಿರಲು ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ವೇಳೆ ಜಮೀರ್ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಒಂದು ಕಾಂಗ್ರೆಸ್ ಹೈಕಮಾಂಡ್ ನಾಯಕರ ಗಮನಕ್ಕೆ ಬಂದಿದ್ದು, ಅದನ್ನು ಆಧಾರ ಮಾಡಿಕೊಂಡು ಕೆಲ ಹಿರಿಯ ನಾಯಕರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಸಂಪುಟದಲ್ಲಿ ಅವಕಾಶ ನೀಡಬಾರದು ಎಂಬ ಚರ್ಚೆ ಪಕ್ಷದ ಒಳವಲಯದಲ್ಲಿ ನಡೆದಿರುವ ಮಾಹಿತಿ ಹೊರಬಂದಿದೆ.
ಹೈಕಮಾಂಡ್ಗೆ ತಲುಪಿದ ಆಡಿಯೋ?
ಜಮೀರ್ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ದಾಖಲೆಗಳು ಕಾಂಗ್ರೆಸ್ ಹೈಕಮಾಂಡ್ಗೆ ತಲುಪಿವೆ ಎಂಬ ಮಾಹಿತಿ ಸಿಕ್ಕಿದೆ. ಇದೇ ಬೆಳವಣಿಗೆ ಅವರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದಂತೆ ಮಾಡಿದೆ ಎನ್ನಲಾಗುತ್ತಿದೆ.
ಈ ಸುದ್ದಿಯನ್ನು ಓದಿ : ಕೆ. ಚೆಂಗಲರಾಯ ರೆಡ್ಡಿ: ಕರ್ನಾಟಕದ ಮೊದಲ ಮುಖ್ಯಮಂತ್ರಿ – ಸಂಪೂರ್ಣ ಮಾಹಿತಿ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೂ ಈ ಮಾಹಿತಿ ತಲುಪಿಸಲಾಗಿದೆ ಎನ್ನಲಾಗುತ್ತಿದ್ದು, ಅವರ ಸೂಚನೆಯ ಹಿನ್ನೆಲೆಯಲ್ಲಿ ಮೊದಲ ಹಂತದ ಸಂಪುಟದಲ್ಲಿ ಜಮೀರ್ ಅವರನ್ನು ಕೈಬಿಡಲಾಗಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ರಾಜಣ್ಣ ಉದಾಹರಣೆ ಮತ್ತೆ ಚರ್ಚೆಗೆ :
ಈ ಹಿಂದೆ ಕೆ.ಎನ್. ರಾಜಣ್ಣ ಅವರು ನೀಡಿದ್ದ ಹೇಳಿಕೆ ರಾಜಕೀಯವಾಗಿ ದೊಡ್ಡ ಹಿನ್ನಡೆಗೆ ಕಾರಣವಾಗಿತ್ತು. ರಾಹುಲ್ ಗಾಂಧಿ ಸೂಚನೆಯಂತೆ ಅವರನ್ನು ಸಂಪುಟದಿಂದ ಏಕಾಏಕಿ ಕೈಬಿಡಲಾಗಿತ್ತು ಎನ್ನುವ ಬೆಳವಣಿಗೆ ಈಗ ಮತ್ತೆ ಚರ್ಚೆಗೆ ಬಂದಿದೆ.
ಆ ವೇಳೆ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರೂ ಕೂಡ ರಾಜಣ್ಣ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಇದೇ ರೀತಿಯ ಪರಿಸ್ಥಿತಿ ಜಮೀರ್ ಅವರಿಗೂ ಎದುರಾಗುತ್ತಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಜಮೀರ್ ಅಹ್ಮದ್ ಒತ್ತಡ ತಂತ್ರ ?
ಈ ನಡುವೆ ಜಮೀರ್ ಅಹ್ಮದ್ ಖಾನ್ ತಮ್ಮ ಪರ ರಾಜಕೀಯ ಒತ್ತಡ ಹೆಚ್ಚಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿರುವ ಅವರು, ತಮ್ಮ ಬೆಂಬಲಿಗರ ಮೂಲಕ ಹೋರಾಟಕ್ಕೂ ಮುಂದಾಗಿದ್ದಾರೆ.
ಇದನ್ನು ಓದಿ : ಮಳೆಗಾಲಕ್ಕೆ ನೈಋತ್ಯ ರೈಲ್ವೆ ಹೈಅಲರ್ಟ್: 15 ಸೇತುವೆ ಹಾಗೂ 48 RUB ಮೇಲೆ ಕಟ್ಟೆಚ್ಚರ.
ಈ ಮಧ್ಯ ಪಾದರಾಯನಪುರದಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸುವ ಪ್ರಯತ್ನ ನಡೆದಿದ್ದರೂ, ಪೊಲೀಸರು ಅದಕ್ಕೆ ಅವಕಾಶ ನೀಡಿರಲಿಲ್ಲ ಎಂಬ ಮಾಹಿತಿ ಹೊರಬಂದಿದೆ.
ದೆಹಲಿ ಸಭೆಯ ಬಳಿಕ ಅಂತಿಮ ನಿರ್ಧಾರ?
ಜೂನ್ 21ರಂದು ಬಿಕೆ ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಕೆ ಹರಿಪ್ರಸಾದ್ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಅಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆ ನಡೆಯುವ ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತು ಅಂತಿಮ ಚರ್ಚೆ ನಡೆಯಲಿದ್ದು, ಅದರ ಬಳಿಕವೇ ಹೊಸ ಸಚಿವರ ಪಟ್ಟಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ.
ಪ್ರಸ್ತುತ ಯು.ಟಿ. ಖಾದರ್ ಅವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿರುವ ಹಿನ್ನೆಲೆಯಲ್ಲಿ, ಉಳಿದ ಒಂದು ಅಥವಾ ಎರಡು ಸ್ಥಾನಗಳಲ್ಲಿ ಮುಸ್ಲಿಂ ಸಮುದಾಯದ ನಾಯಕರಿಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಆದರೆ ಅಂತಿಮವಾಗಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ರಾಜ್ಯ ರಾಜಕೀಯದಲ್ಲಿ ಮುಂದುವರಿದಿದೆ.
Courtesy : Vijay Karnataka
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ





