Advertisement
Advertisement

ಗ್ರಾಹಕರಿಗೆ ಶಾಕ್: ರಾಜ್ಯದಲ್ಲಿ ಮೊಟ್ಟೆ ಬೆಲೆ ₹8.50ಕ್ಕೆ ಏರಿಕೆ, ಇನ್ನಷ್ಟು ದುಬಾರಿ ಸಾಧ್ಯತೆ!

ರಾಜ್ಯದಲ್ಲಿ ಮೊಟ್ಟೆ ಬೆಲೆ ₹8.50ಕ್ಕೆ ಏರಿಕೆ, ಇನ್ನಷ್ಟು ದುಬಾರಿ ಸಾಧ್ಯತೆ!

ಬೆಂಗಳೂರು : ರಾಜ್ಯದಲ್ಲಿ ಮೊಟ್ಟೆ ಬೆಲೆ ₹8.50ಕ್ಕೆ ಏರಿಕೆಯಾದ ಹಿನ್ನಲೆಯಲ್ಲಿ ಗ್ರಾಹಕ ಶಾಕ್‌ ಆಗಿದ್ದಾನೆ. ಮೂಲಗಳ ಪ್ರಕಾರ ಮೊಟ್ಟೆ (ತತ್ತಿ) ಬೆಲೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ದಿನೇ ದಿನೇ ಬೆಲೆ ಏರಿಕೆಯ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ತತ್ತಿಯೂ ಹೊಸದಾಗಿ ಸೇರುತಿದೆ.

ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ತತ್ತಿ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಸಾಮಾನ್ಯ ಗ್ರಾಹಕರಿಂದ ಹಿಡಿದು ಹೋಟೆಲ್‌, ಬೇಕರಿ ಉದ್ಯಮಗಳವರೆಗೆ ಇದರ ನೇರ ಪರಿಣಾಮ ಕಾಣಿಸುತ್ತಿದೆ.

ಮೊಟ್ಟೆ ಬೆಲೆ ₹7.20 ರಿಂದ ₹8.50 ಏರಿಕೆ :

ಪ್ರಸ್ತುತ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಒಂದು ತತ್ತಿಯ ಬೆಲೆ ಸುಮಾರು ₹7.20 ರಿಂದ ₹7.50 ರವರೆಗೆ ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಅದು ₹8.50 ಅಥವಾ ಅದಕ್ಕಿಂತ ಹೆಚ್ಚು ತಲುಪುತ್ತಿದೆ.

ಪೌಲ್ಟ್ರಿ ಕ್ಷೇತ್ರದ ತಜ್ಞರ ಪ್ರಕಾರ, ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ತತ್ತಿ ಉತ್ಪಾದನೆಯಲ್ಲಿ ಉಂಟಾದ ಇಳಿಕೆ. ದೇಶದ ಒಟ್ಟು ತತ್ತಿ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ರಾಜ್ಯಗಳೆಂದರೆ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ.

ಈ ಸುದ್ದಿಯನ್ನು ಓದಿ : ದೇವರ ಹುಂಡಿಯಲ್ಲಿ ಸಿಕ್ಕ 20 ರೂ. ನೋಟು ನೋಡಿ ಸಿಬ್ಬಂದಿ ಶಾಕ್; ಅದರಲ್ಲಿ ಬರೆದಿದ್ದಾದರೂ ಏನು ಗೊತ್ತಾ?

40 ಶೇಕಡಾ ಕೊಡುಗೆ :

ಈ ಮೂರು ರಾಜ್ಯಗಳಲ್ಲಿ ತೀವ್ರ ಬಿಸಿಲಿನ ವಾತಾವರಣ ಮುಂದುವರಿದಿದ್ದು, ಇದರಿಂದ ಕೋಳಿಗಳ ಮೊಟ್ಟೆ ಉತ್ಪಾದನೆ ಕುಸಿತ ಕಂಡಿದೆ. ಅಲ್ಲದೇ ಈ ಮೂರು ರಾಜ್ಯಗಳು ದೇಶದ ತತ್ತಿ ಉತ್ಪಾದನೆಯಲ್ಲಿ ಸುಮಾರು 40 ಶೇಕಡಾ ಕೊಡುಗೆ ನೀಡುತ್ತವೆ.

ಇದರ ಜೊತೆಗೆ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮೊಟ್ಟೆ ರಫ್ತು ಮತ್ತೆ ಆರಂಭವಾಗಿರುವುದು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಗೆ ಒತ್ತಡ ತಂದಿದೆ. ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಪುನರಾರಂಭವಾದ ಕಾರಣ ಸ್ಥಳೀಯ ಮಾರುಕಟ್ಟೆಗೆ ಸಿಗುವ ಮೊಟ್ಟೆಗಳ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗಿದೆ.

ಸರ್ಕಾರದ ಬಿಸಿಯೂಟಕ್ಕೂ ತತ್ತಿ :

ಇದೇ ವೇಳೆ ಶಾಲೆಗಳು ಪುನಾರಂಭವಾಗಿರುವುದರಿಂದ ಸರ್ಕಾರದ ಬಿಸಿಯೂಟ ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಮೊಟ್ಟೆಗಳ ಬೇಡಿಕೆ ಹೆಚ್ಚಾಗಿದೆ. ಕೆಲವು ರಾಜ್ಯಗಳಲ್ಲಿ ಪ್ರತಿದಿನ ಲಕ್ಷಾಂತರ ಮೊಟ್ಟೆಗಳು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದ್ದು, ಇದರಿಂದ ಇತರ ಮಾರುಕಟ್ಟೆಗಳಿಗೆ ಸರಬರಾಜು ಕಡಿಮೆಯಾಗುತ್ತಿದೆ.

ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಳವಾಗಿದ್ದು, ಇದು ಕೂಡ ತತ್ತಿ ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ. ಕೋಳಿ ಆಹಾರ ತಯಾರಿಕೆಗೆ ಬಳಸುವ ಜೋಳ ಮತ್ತು ಸೋಯಾಬೀನ್ ಬೆಲೆ ಹೆಚ್ಚಾಗಿರುವುದರಿಂದ ಫಾರ್ಮ್‌ಗಳ ನಿರ್ವಹಣಾ ವೆಚ್ಚವೂ ಏರಿಕೆಯಾಗಿದೆ. ಹೀಗಾಗಿ ಪೌಲ್ಟ್ರಿ ಉದ್ಯಮಕ್ಕೆ ಹೆಚ್ಚುವರಿ ಹೊರೆ ತಂದಿದೆ.

ಇದನ್ನು ಓದಿ : ಕೈಕೊಟ್ಟ ಮುಂಗಾರು: ದೇಶದಲ್ಲಿ 64% ಮಳೆ ಕೊರತೆ, ಬೆಚ್ಚಿಬೀಳಿಸಿದ ಉಪಗ್ರಹ ಚಿತ್ರ.

ಪೌಲ್ಟ್ರಿ ಉದ್ಯಮದ ಮಾಹಿತಿಯಂತೆ, ಮಳೆಗಾಲ ಆರಂಭದವರೆಗೆ ತತ್ತಿ ದರ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ. ಉತ್ಪಾದನೆ ಸಾಮಾನ್ಯ ಮಟ್ಟಕ್ಕೆ ಮರಳಲು ಇನ್ನೂ ಕೆಲವು ವಾರಗಳು ಬೇಕಾಗಬಹುದು. ಪ್ರಸ್ತುತ ಈ ದರ ಏರಿಕೆಯಿಂದ ಉತ್ಪಾದಕರಿಗೆ ಲಾಭವಾಗುತ್ತಿದ್ದರೂ, ಗ್ರಾಹಕರಿಗೆ ಇದು ದುಬಾರಿ ಹೊರೆ ಆಗುತ್ತಿದೆ.

ಗಮನಾರ್ಹ ಸಂಗತಿ ಏನೆಂದರೆ, ತಮಿಳುನಾಡಿನ ನಾಮಕ್ಕಲ್ ಪ್ರದೇಶದಲ್ಲಿ ಪ್ರತಿದಿನ ಸುಮಾರು 7 ಕೋಟಿ ತತ್ತಿಗಳು ಉತ್ಪಾದನೆಯಾಗುತ್ತಿದ್ದು, ಅದರಲ್ಲಿ ದೊಡ್ಡ ಪ್ರಮಾಣದ ಸರಬರಾಜು ಕರ್ನಾಟಕಕ್ಕೂ ಬರುತ್ತಿದೆ. ಆದರೆ ಬೇಡಿಕೆ ಹೆಚ್ಚಳ ಮತ್ತು ಪೂರೈಕೆ ಕುಸಿತದಿಂದ ಮುಂದಿನ ದಿನಗಳಲ್ಲಿ ತತ್ತಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ತಳ್ಳಿಹಾಕಲು ಸಾಧ್ಯವಿಲ್ಲ.

ಸಂಪಾದಕೀಯ :

  • ತತ್ತಿ ಪೌಷ್ಟಿಕಾಂಶಗಳ ಭಂಡಾರವೆಂದೇ ಪರಿಗಣಿಸಲಾಗುತ್ತದೆ.
  • ಇದರಲ್ಲಿ ಪ್ರೋಟೀನ್, ವಿಟಮಿನ್ ಹಾಗೂ ದೇಹಕ್ಕೆ ಅಗತ್ಯವಾದ ಖನಿಜಾಂಶಗಳು ಸಮೃದ್ಧವಾಗಿವೆ. ಮಕ್ಕಳಿಂದ ವಯಸ್ಕರ ತನಕ ಎಲ್ಲರ ಆರೋಗ್ಯಕ್ಕೆ ತತ್ತಿ ಉತ್ತಮ ಆಹಾರವಾಗಿದೆ.
  • ಇತ್ತೀಚೆಗೆ ಮಾರುಕಟ್ಟೆಯಲ್ಲಿ ತತ್ತಿ ಬೆಲೆ ಏರಿಕೆಯಾಗುತ್ತಿರುವುದು ಸಾಮಾನ್ಯ ಗ್ರಾಹಕರಿಗೆ ಹೆಚ್ಚುವರಿ ಹೊರೆ ತಂದಿದೆ. ಆದರೂ ದೈನಂದಿನ ಆಹಾರ ಪದ್ಧತಿಯಲ್ಲಿ ತತ್ತಿ ಪ್ರಮುಖ ಸ್ಥಾನವನ್ನು ಉಳಿಸಿಕೊಂಡಿದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ 


Disclaimer: ಈ ಮೊಟ್ಟೆ (ತತ್ತಿ) ಲೇಖನವು ಮಾರುಕಟ್ಟೆ ಮಾಹಿತಿ, ಪೌಲ್ಟ್ರಿ ಕ್ಷೇತ್ರದ ಲಭ್ಯ ವರದಿಗಳು ಹಾಗೂ ವಿವಿಧ ಸಾರ್ವಜನಿಕ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಬೆಲೆಗಳು ಸ್ಥಳಾನುಸಾರ ಬದಲಾಗಬಹುದು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top