ಬೆಂಗಳೂರು : ಕರ್ನಾಟಕ ಸರ್ಕಾರ ಮಹತ್ಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಗೆ ಹೊಸ ರೂಲ್ಸ್ ತರಲು ಮುಂದಾಗಿದ್ದು, ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಡಿಕೆ ಶಿವಕುಮಾರ್ (D. K. Shivakumar) ಮರು ಅರ್ಜಿ ಸಲ್ಲಿಕೆ ಕಡ್ಡಾಯ ಎಂದಿದ್ದಾರೆ.
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಇದೀಗ ಮತ್ತೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರತಿ ತಿಂಗಳು ಮನೆಯ ಮಹಿಳಾ ಯಜಮಾನಿಯ ಬ್ಯಾಂಕ್ ಖಾತೆಗೆ ₹2000 ಜಮೆಯಾಗುವ ಈ ಯೋಜನೆಯಲ್ಲಿ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿರುವುದು ಲಕ್ಷಾಂತರ ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ.
ಈ ಕುರಿತು ವಿಧಾನಸೌಧದಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ , ಯೋಜನೆಯ ಲಾಭವನ್ನು ಕೇವಲ ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಿಸುವ ಉದ್ದೇಶದಿಂದ ಹೊಸ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದರ ಭಾಗವಾಗಿ ಫಲಾನುಭವಿಗಳು ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಬಹುದು ಎಂಬ ಮಾಹಿತಿ ನೀಡಿದ್ದಾರೆ. ಸದ್ಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತಿದೆ.
ಸರ್ಕಾರದ ಮಾಹಿತಿ ಪ್ರಕಾರ, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಕೆಲ ಅನರ್ಹರು ಕೂಡ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ಪ್ರಕರಣಗಳಲ್ಲಿ ತಪ್ಪು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಹಾಗೂ ದಾಖಲಾತಿಗಳಲ್ಲಿ ಗೊಂದಲ ಕಂಡುಬಂದಿರುವ ಹಿನ್ನೆಲೆಯಲ್ಲಿ ಪರಿಶೀಲನೆ ಆರಂಭಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಸುದ್ದಿಯನ್ನು ಓದಿ : ರಾತ್ರಿ ಊಟ ಮಾಡದೇ ಮಲಗುತ್ತೀರಾ? ಇದೆಷ್ಟು ದೊಡ್ಡ ಹಾನಿ ಮಾಡುತ್ತೆ ಗೊತ್ತಾ?
ಇದರಿಂದ ಯೋಜನೆಯಲ್ಲಿ ಇರುವ ಅನರ್ಹರನ್ನು ಗುರುತಿಸಿ ಹೊರಗಿಡಲು ಸರ್ಕಾರ ಹೊಸ ಅರ್ಜಿ ಪ್ರಕ್ರಿಯೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಆದರೆ ಇದರಿಂದ ಅರ್ಹ ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯ ₹2000 ಸಹಾಯಧನವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಭರವಸೆ ನೀಡಿದೆ. ಆದರೆ ಹಣ ಸರಿಯಾದ ಫಲಾನುಭವಿಗಳ ಕೈ ಸೇರಬೇಕು ಎಂಬ ಕಾರಣಕ್ಕೆ ಕಟ್ಟುನಿಟ್ಟಿನ ಪರಿಶೀಲನೆ ನಡೆಯಲಿದೆ ಎಂದು ಹೇಳಲಾಗಿದೆ.
4.30 ಲಕ್ಷ ಫಲಾನುಭವಿಗಳ ಹೆಸರು ಡಿಲಿಟ್ :
ಇದೇ ವೇಳೆ ಸರ್ಕಾರ “ಆಪರೇಷನ್ ಗೃಹಲಕ್ಷ್ಮಿ” ಹೆಸರಿನಲ್ಲಿ ವಿಶೇಷ ಪರಿಶೀಲನಾ ಕಾರ್ಯಾಚರಣೆ ಆರಂಭಿಸಿದೆ. ಈಗಾಗಲೇ ಯೋಜನೆಯ ಪಟ್ಟಿಯಿಂದ ಸುಮಾರು 4.30 ಲಕ್ಷ ಫಲಾನುಭವಿಗಳ ಹೆಸರನ್ನು ತೆಗೆದುಹಾಕಲಾಗಿದೆ ಎನ್ನಲಾಗಿದ್ದು, ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಉಳಿತಾಯವಾಗುವ ಸಾಧ್ಯತೆ ಇದೆ.
ಇದನ್ನು ಓದಿ : ಗೃಹಲಕ್ಷ್ಮಿ ಹಣ ಪಡೆಯಲು ಈ ವಿಧಾನ ಕಡ್ಡಾಯ? ಫಲಾನುಭವಿಗಳಿಗೆ ಹೊಸ ನಿಯಮದ ಚರ್ಚೆ!
ಪ್ರಸ್ತುತ ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಅರ್ಜಿ ಪ್ರಕ್ರಿಯೆ ಹಾಗೂ ಪರಿಷ್ಕರಣೆಯ ಸಂಪೂರ್ಣ ಮಾಹಿತಿ ಸರ್ಕಾರ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
ಸಂಪಾದಕೀಯ :
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಲಕ್ಷಾಂತರ ಮಹಿಳೆಯರ ಆರ್ಥಿಕ ಬಲವರ್ಧನೆಗೆ ನೆರವಾಗಿರುವ ಮಹತ್ವದ ಯೋಜನೆಯಾಗಿದೆ.
ಆದರೆ ಯೋಜನೆಯ ಲಾಭ ಅನರ್ಹರಿಗೂ ತಲುಪುತ್ತಿರುವ ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಸರ್ಕಾರ ವ್ಯವಸ್ಥೆಯಲ್ಲಿರುವ ಲೋಪಗಳನ್ನು ತಿದ್ದಲು ಕ್ರಮ ತೆಗೆದುಕೊಳ್ಳಲಿದೆ. ಇದೀಗ ಸರ್ಕಾರ ಹೊಸ ಅರ್ಜಿ ಪ್ರಕ್ರಿಯೆ ಮೂಲಕ ನಿಜವಾದ ಫಲಾನುಭವಿಗಳನ್ನು ಗುರುತಿಸಲು ಮುಂದಾಗಿರುವುದು ಅಗತ್ಯ ಕ್ರಮವಾಗಿದ್ದರೂ ಕೂಡಾ ಮತ್ತೊಂದೆಡೆ ಅರ್ಹ ಮಹಿಳೆಯರಲ್ಲಿ ಅನಗತ್ಯ ಆತಂಕ ಉಂಟುಮಾಡಿದೆ.
ಯಾವುದೇ ಪರಿಷ್ಕರಣೆ ಪಾರದರ್ಶಕವಾಗಿ ನಡೆಯಬೇಕು ಮತ್ತು ಅರ್ಹರಿಗೆ ಹಣ ತಲುಪುವಲ್ಲಿ ವ್ಯತ್ಯಯ ಆಗದಂತೆ ಜನಪರ ಯೋಜನೆಗಳ ವಿಶ್ವಾಸ ಉಳಿಸಿಕೊಳ್ಳುವುದು ಸರ್ಕಾರದ ಮುಂದಿನ ದೊಡ್ಡ ಸವಾಲಾಗಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ





