ಆರೋಗ್ಯ ಮಾಹಿತಿ : ಹಾರ್ಟ್ ಅಟ್ಯಾಕ್ ಬರುವ ಒಂದು ತಿಂಗಳ ಮುಂಚೆಯೇ ದೇಹದಲ್ಲಿ ಕಾಣಿಸಿಕೊಳ್ಳುವ ಈ ಎಚ್ಚರಿಕೆ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಆ ಪ್ರಮುಖ ಲಕ್ಷಣಗಳು ಯಾವವು? ಮತ್ತು ವೈದ್ಯರ ಸಲಹೆಗಳು ಏನು ಅಂತ ಇಂದಿನ ಆರೋಗ್ಯ ಮಾಹಿತಿಯಲ್ಲಿ ತಿಳಿಯೋಣ ಬನ್ನಿ.!
ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಒತ್ತಡ, ಅಸಮತೋಲಿತ ಆಹಾರ ಪದ್ಧತಿ ಹಾಗೂ ವ್ಯಾಯಾಮದ ಕೊರತೆಯ ಹಿನ್ನಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಅದರಲ್ಲೂ ಹಾರ್ಟ್ ಅಟ್ಯಾಕ್ (Heart Attack) ಈಗ ವಯಸ್ಸಾದವರಲ್ಲಿ ಮಾತ್ರವಲ್ಲದೆ, ಮಕ್ಕಳು ಮತ್ತು ಯುವಜನರಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ವೈದ್ಯರ ಪ್ರಕಾರ, ಹೃದಯಾಘಾತವು ಅನೇಕ ಸಂದರ್ಭಗಳಲ್ಲಿ ಇದ್ದಕ್ಕಿದ್ದಂತೆ ಸಂಭವಿಸಿದಂತೆ ಕಂಡರೂ ಕೂಡಾ, ಅದಕ್ಕೂ ಮುನ್ನ ದೇಹ ಕೆಲವು ಎಚ್ಚರಿಕೆ ಸೂಚನೆಗಳನ್ನು ನೀಡುತ್ತದೆ. ಇಂತಹ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ವೈದ್ಯರನ್ನು ಸಂಪರ್ಕಿಸಿದರೆ ಗಂಭೀರ ಅಪಾಯವನ್ನು ತಪ್ಪಿಸಬಹುದು.
ಸೌಲ್ ಹಾರ್ಟ್ ಸೆಂಟರ್ ಆಸ್ಪತ್ರೆಯ ಸಂಸ್ಥಾಪಕರಾದ ಹೃದ್ರೋಗ ತಜ್ಞ ಡಾ. ಬಿಮಲ್ ಛಾಜರ್ (MBBS, MD) ಅವರ ಪ್ರಕಾರ, ಹಾರ್ಟ್ ಅಟ್ಯಾಕ್ಗೆ ಒಂದು ತಿಂಗಳ ಮುಂಚೆಯೇ ಕೆಲವು ಲಕ್ಷಣಗಳು ಗೋಚರಿಸಬಹುದು. ಮಹಿಳೆಯರು ಹಾಗೂ ವಯಸ್ಸಾದವರಲ್ಲಿ ಈ ಲಕ್ಷಣಗಳು ಕೆಲವೊಮ್ಮೆ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.
ಹಾರ್ಟ್ ಅಟ್ಯಾಕ್ಗೆ 1 ತಿಂಗಳ ಮುಂಚೆಯೇ ಕಾಣಿಸಿಕೊಳ್ಳುವ ಲಕ್ಷಣಗಳು :
ಇದನ್ನು ಓದಿ : ಹೊಟ್ಟೆಯಲ್ಲಿ ಪದೇ ಪದೇ ಗ್ಯಾಸ್ ತುಂಬುತ್ತಿದೆಯೇ? ಕಾರಣ ಆಹಾರವಷ್ಟೆಯಲ್ಲ, ಈ ಆರೋಗ್ಯ ಸಮಸ್ಯೆಗಳೂ ಇರಬಹುದು!
ಎದೆಯಲ್ಲಿ ಒತ್ತಡ ಅಥವಾ ಅಸ್ವಸ್ಥತೆ :
ಹೃದಯದ ಸಮಸ್ಯೆಯ ಪ್ರಮುಖ ಆರಂಭಿಕ ಲಕ್ಷಣಗಳಲ್ಲಿ ಎದೆನೋವು ಅಥವಾ ಎದೆಯಲ್ಲಿ ಅಸ್ವಸ್ಥತೆ ಪ್ರಮುಖವಾಗಿದೆ.
ಎದೆ ಬಿಗಿಯಾಗುವುದು, ಭಾರವಾದ ಅನುಭವ, ಒತ್ತಡ ಅಥವಾ ಸುಡುವ ರೀತಿಯ ನೋವು ಕೆಲವು ನಿಮಿಷಗಳ ಬಳಿಕ ಕಡಿಮೆಯಾದರೂ ಅದನ್ನು ಸಾಮಾನ್ಯವೆಂದು ನಿರ್ಲಕ್ಷಿಸಬಾರದು. ಇದು ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿರುವ ಸೂಚನೆಯಾಗಿರಬಹುದು.
ಉಸಿರಾಟದ ತೊಂದರೆ :
ಸ್ವಲ್ಪ ದೂರ ನಡೆದರೂ ಉಸಿರು ಕಟ್ಟುವುದು, ಮೆಟ್ಟಿಲು ಹತ್ತಿದಾಗ ಉಸಿರಾಟ ಕಷ್ಟವಾಗುವುದು ಅಥವಾ ಮಾತನಾಡುವಾಗಲೇ ಉಸಿರುಗಟ್ಟಿದ ಅನುಭವವಾಗುವುದು ಕೂಡ ಹೃದಯದ ಸಮಸ್ಯೆಯ ಸೂಚನೆಯಾಗಿರಬಹುದು. ವಿಶೇಷವಾಗಿ ಮಧುಮೇಹ ಇರುವವರು ಮತ್ತು ಹಿರಿಯ ನಾಗರಿಕರು ಈ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ಅತಿಯಾದ ಆಯಾಸ :
ಸಾಮಾನ್ಯ ಕೆಲಸಗಳನ್ನೇ ಮಾಡಲು ದೇಹದಲ್ಲಿ ಶಕ್ತಿ ಇಲ್ಲದಂತಾಗುವುದು, ಸಣ್ಣ ಕೆಲಸಕ್ಕೂ ಹೆಚ್ಚು ಆಯಾಸವಾಗುವುದು ಅಥವಾ ದಿನವಿಡೀ ದಣಿದಿರುವ ಅನುಭವ ಉಂಟಾಗುವುದು ಹೃದಯ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಸೂಚನೆಯಾಗಿರಬಹುದು. ಇಂತಹ ಲಕ್ಷಣಗಳು ನಿರಂತರವಾಗಿ ಕಂಡುಬಂದರೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.
ತೋಳು, ಕುತ್ತಿಗೆ ಮತ್ತು ಬೆನ್ನಿನಲ್ಲಿ ನೋವು :
ಹೃದಯದ ನೋವು ಕೇವಲ ಎದೆಯಲ್ಲೇ ಕಾಣಿಸಿಕೊಳ್ಳಬೇಕೆಂದಿಲ್ಲ. ಎರಡು ತೋಳುಗಳು, ಕುತ್ತಿಗೆ, ದವಡೆ, ಭುಜ ಅಥವಾ ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಂಡರೂ ಅದು ಹೃದಯಾಘಾತದ ಆರಂಭಿಕ ಲಕ್ಷಣವಾಗಿರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಈ ಸುದ್ದಿಯನ್ನು ಓದಿ : ಕರ್ನಾಟಕ ಲೋಕಾಯುಕ್ತದಲ್ಲಿ ಖಾಲಿ ಹುದ್ದೆಗಳ ಭರ್ತಿ; 12ನೇ ತರಗತಿ ಪಾಸ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.
ಚಳಿಯಲ್ಲೂ ಬೆವರುವುದು :
ಯಾವುದೇ ದೈಹಿಕ ಶ್ರಮವಿಲ್ಲದೆ ಅಥವಾ ಚಳಿ ವಾತಾವರಣದಲ್ಲಿಯೂ ಹೆಚ್ಚು ಬೆವರುವುದು, ತಲೆಸುತ್ತುವುದು, ವಾಕರಿಕೆ ಅಥವಾ ಹಸಿವು ಕಡಿಮೆಯಾಗುವುದು ಕೂಡ ಹೃದಯ ಸಂಬಂಧಿತ ಸಮಸ್ಯೆಯ ಸೂಚನೆಯಾಗಿರಬಹುದು. ಈ ಲಕ್ಷಣಗಳು ಕಂಡುಬಂದರೆ ವಿಳಂಬ ಮಾಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ನಿದ್ರೆಯಲ್ಲಿ ವ್ಯತ್ಯಾಸ :
ಹೆಚ್ಚು ದಿನಗಳ ಕಾಲ ನಿದ್ರೆ ಸರಿಯಾಗಿ ಬಾರದಿರುವುದು, ಬೇಗ ನಿದ್ರೆಗೆ ಜಾರದಿರುವುದು ಅಥವಾ ತಿಂಗಳಲ್ಲಿ ಪದೇ ಪದೇ ನಿದ್ರಾಹೀನತೆ ಕಾಡುವುದು ಕೂಡ ಕೆಲವರಲ್ಲಿ ಹೃದಯ ಸಮಸ್ಯೆಯೊಂದಿಗೆ ಸಂಬಂಧ ಹೊಂದಿರಬಹುದು. ಇಂತಹ ಸಮಸ್ಯೆ ನಿರಂತರವಾಗಿ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.
ಆರೋಗ್ಯಕರ ಜೀವನಶೈಲಿಯೇ ಉತ್ತಮ ರಕ್ಷಣೆ
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು, ಮಾನಸಿಕ ಒತ್ತಡ ನಿಯಂತ್ರಿಸುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.
ದೇಹ ನೀಡುವ ಯಾವುದೇ ಎಚ್ಚರಿಕೆ ಲಕ್ಷಣಗಳನ್ನು ನಿರ್ಲಕ್ಷಿಸದೇ ಸಮಯಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡರೆ ಹೃದಯಾಘಾತದ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ
Disclaimer: ಮೇಲಿನ ಹಾರ್ಟ್ ಅಟ್ಯಾಕ್ ಮಾಹಿತಿ ಸಾರ್ವಜನಿಕ ಆರೋಗ್ಯ ಜಾಗೃತಿಗಾಗಿ ಮಾತ್ರ. ಇಲ್ಲಿ ಉಲ್ಲೇಖಿಸಿರುವ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧಿ ಸೇವಿಸುವ ಬದಲು ತಕ್ಷಣ ಅರ್ಹ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಗತ್ಯ.







